ಅಥಣಿ: ಕೊರೊನಾ ಅಬ್ಬರದಿಂದಾಗಿ ಆರೋಗ್ಯ ರಕ್ಷಣೆಯ ಜೊತೆ ರೈತರು ತಾವು ಬೆಳೆದ ಬೆಳೆಯ ಮಾರಾಟಕ್ಕೆ ಪರದಾಡುವಂತಾಗಿದೆ.
ತಾಲೂಕಿನ ಶಿರಹಟ್ಟಿ ಗ್ರಾಮದ ರೈತ ಅಪ್ಪಾಸಾಬ್ ಮಾಲೋಜಿ ಮೂರು ಎಕರೆ ಪ್ರದೇಶದಲ್ಲಿ 2400 ಪೇರು ಗಿಡಗಳನ್ನು ಬೆಳೆದಿದ್ದು, ಈಗ ಫಸಲು ಬಂದಿದ್ದು ಹಣ್ಣುಗಳನ್ನು ಮಾರಾಟವಾಗದೆ ತೊಂದರೆಗೆ ಸಿಲುಕಿದ್ದಾರೆ. ಇದರಿಂದ ಸರಿಸುಮಾರು 4 ರಿಂದ 5 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ಪೋಷಿಸಿದ ಬೆಳೆಯು, ಕೊಯ್ಲಿಗೆ ಬಂದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಸರಬರಾಜಾಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತರ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಕೂಡಲೇ ತೋಟಗಾರಿಕೆ ಬೆಳೆ ಬೆಳೆದ ರೈತರ ಸಾಲ ಮನ್ನಾ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಸರ್ಕಾರ ರೈತರ ಪರಿಸ್ಥಿತಿ ಅರಿತು ಪರಿಹಾರದ ಹಣವನ್ನೇನೋ ಘೋಷಿಸಿದೆ. ಆದರೆ ಅಲ್ಪ ಪರಿಹಾರಧನ ಯಾವುದಕ್ಕೂ ಸಾಲುವುದಿಲ್ಲ. ದಯವಿಟ್ಟು ಸರ್ಕಾರ ತೋಟಗಾರಿಕೆ ಬೆಳೆ ಬೆಳೆದ ರೈತರ ಸಾಲ ಮನ್ನಾ ಮಾಡುವಂತೆ ಅಪ್ಪಾಸಾಬ್ ಮಾಳೋಜಿ ಸರ್ಕಾರಕ್ಕೆ ಮನವಿ ಮಾಡಿದರು.