ಬೆಳಗಾವಿ: ಅನಧಿಕೃತ ವಿದ್ಯುತ್ ಸಂಪರ್ಕ ಪಡೆದು ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ ಆರೋಪಿಗೆ ಬೆಳಗಾವಿಯ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಹಾಗೂ 21 ಸಾವಿರ ದಂಡ ವಿಧಿಸಿದೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ. ಕಲ್ಲಾಪುರ ಗ್ರಾಮದ ಶಿವನಗೌಡ ಪಾಟೀಲ ಶಿಕ್ಷೆಗೊಳಗಾದ ಆರೋಪಿ. ಈತ ತನ್ನ ಬೆಳೆಗೆ ನೀರು ಪೂರೈಸಲು ಪಂಪ್ ಸೆಟ್ಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿದ್ದನು. ಅನಧಿಕೃತ ವಿದ್ಯುತ್ ಪಡೆಯಲು ಬಳಸಿದ್ದ ವೈಯರ್ ತಾಗಿ ಇದೇ ಗ್ರಾಮದ ಹಣಮಂತಗೌಡ ಪಾಟೀಲ ಮೃತಪಟ್ಟಿದ್ದನು. ಶಿವನಗೌಡ ಪಕ್ಕದಲ್ಲಿ ಹಣಮಂತಗೌಡ ಪಾಟೀಲ ಜಮೀನಿತ್ತು. ಶಿವನಗೌಡ ಜಮೀನಿನಲ್ಲಿ ದಾಟಿ 2016 ಅಕ್ಟೋಬರ್ 16 ರಂದು ಹಣಮಂತಗೌಡ ತಮ್ಮ ಜಮೀನಿಗೆ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ಭೂಗತ ಪಾತಕಿ ಬಚ್ಚಾಖಾನ್ಗೆ ನ್ಯಾಯಾಂಗ ಬಂಧನ
ಘಟನೆ ಬಳಿಕ ಹಣಮಂತಗೌಡನ ಪುತ್ರ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಶಿವನಗೌಡ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಿ ರಾಮದುರ್ಗ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶ ಬಸವರಾಜ ಅವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕ ವಿದ್ಯಾಸಾಗರ ದರಬಾರೆ ವಕಾಲತ್ತು ವಹಿಸಿದ್ದರು.