ಅಥಣಿ: ಡಿಸಿಎಂ ಲಕ್ಷ್ಮಣ್ ಸವದಿ ಸ್ವಕ್ಷೇತ್ರವಾದ ತಾಲೂಕಿನ ಐಗಳಿಯಲ್ಲಿ ಗ್ರಾಮಸ್ಥರಿಂದ ಜಮೀನುಗಳಿಗೆ ಕೆರೆ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮದ ಸಭಾ ಭವನದ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.
ಐಗಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಯ ನೀರನ್ನು ಕೃಷಿಗೆ ಹರಿಸುವಂತೆ ಪಟ್ಟು ಹಿಡಿದು ಗ್ರಾಮದ ಸಭಾ ಭವನದ ಎದುರು ಪ್ರತಿಭಟನೆ ಕೈಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಸತತ ಮಳೆಯಿಂದ ಕೆರೆ ಸಂಪೂರ್ಣ ತುಂಬಿದೆ. ಇದನ್ನೇ ನಂಬಿಕೊಂಡು 650 ಎಕರೆ ಭೂ ಪ್ರದೇಶದಲ್ಲಿ ಬೆಳೆ ಬೆಳೆಯುವುದರಿಂದ ನಮಗೆ ನೀರಿನ ಅಭಾವ ಆಗಿದೆ. ಪಕ್ಕದ ಗ್ರಾಮದವರ ಷಡ್ಯಂತ್ರ ಹಾಗೂ ಸಣ್ಣ ನೀರಾವರಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ನಮ್ಮ ಬೆಳೆ ಒಣಗುವ ಹಂತಕ್ಕೆ ಬಂದಿದೆ. ಕರಿ ಮಸುತಿ ಏತ ನೀರಾವರಿಯಿಂದ ನಾವು ವಂಚಿತರಾಗಿದ್ದು, ಹಿಂದಿನ ತಹಶೀಲ್ದಾರರ ಆದೇಶದಂತೆ ಕೃಷಿಗೆ ಇಂತಿಷ್ಟು ನೀರು ಬಳಕೆ ಆದೇಶ ಮಾಡಿದ್ದಾರೆ. ಆದ್ರೆ ಈ ಬಗ್ಗೆ ತಾಲೂಕು ಆಡಳಿತ ಮೌನವಹಿಸಿದೆ ಎಂದು ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ತಾಲೂಕಿನ ಆಡಳಿತ ಬೇಜವಾಬ್ದಾರಿಯಿಂದ ಗ್ರಾಮಗಳ ನಡುವೆ ವೈಷಮ್ಯಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸಬೇಕಾಗಿದೆ ಎಂದು ರೈತರು ಪಟ್ಟು ಹಿಡಿದಿದ್ದಾರೆ.