ಬೆಳಗಾವಿ : ರಾಜ್ಯದಲ್ಲಿ ಎರಡೂ ಕ್ಷೇತ್ರಗಳ ಉಪಚುನಾವಣೆ ಮುಗಿದಿದ್ದು, ಇದೀಗ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಗಡಿ ಜಿಲ್ಲೆ ಬೆಳಗಾವಿಗೆ ನಿರೀಕ್ಷೆಗೂ ಮೀರಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಆದರೆ ಹಾಲಿ ವಿಧಾನಸಭೆ ಹಿರಿಯ ಶಾಸಕ ಉಮೇಶ ಕತ್ತಿ ಮಾತ್ರ ಸಂಪುಟದಲ್ಲಿಲ್ಲ. ಸಂಪುಟ ವಿಸ್ತರಣೆ ಇಲ್ಲವೇ ಪುನರ್ ರಚನೆ ವೇಳೆ ಉಮೇಶ ಕತ್ತಿ ಸಂಪುಟ ಸೇರಿದ್ರೆ ಸಂಪುಟದಿಂದ ಹೊರ ಬರುವ ನಾಯಕ ಯಾರು ಎಂಬ ಚರ್ಚೆಗಳು ತೀವ್ರಗೊಂಡಿವೆ.
ಸಚಿವ ಸಂಪುಟ ವಿಸ್ತರಣೆ ದಿನಾಂಕ ನಿಗದಿಗೂ ಮುನ್ನವೇ ಜಿಲ್ಲೆಯಲ್ಲಿ ಸಚಿವ ಸ್ಥಾನ ಕಳೆದುಕೊಳ್ಳುವವರ್ಯಾರು ಎಂಬ ಚರ್ಚೆಗಳು ನಡೆಯುತ್ತಿವೆ. ಯಾವ ಶಾಸಕನಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವುದಕ್ಕಿಂತ ನಾಲ್ವರಲ್ಲಿ ಮಂತ್ರಿ ಸ್ಥಾನ ಕಳೆದುಕೊಳ್ಳುವವರು ಯಾರು ಎಂಬ ಸಂಗತಿ ಕುತೂಹಲಕ್ಕೆ ಕಾರಣವಾಗಿದೆ.
ಡಿಸಿಎಂ ಒಳಗೊಂಡಂತೆ ಈಗಾಗಲೇ ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ನೀಡಲಾಗಿದೆ. ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಶಶಿಕಲಾ ಜೊಲ್ಲೆ ಹಾಗೂ ಶ್ರೀಮಂತ ಪಾಟೀಲ್ ಸಚಿವರಾಗಿದ್ದಾರೆ. ಹಿಂದೆಂದೂ ಸಿಗದಷ್ಟು ರಾಜಕೀಯ ಪ್ರಾತಿನಿಧ್ಯ ಗಡಿ ಜಿಲ್ಲೆ ಬೆಳಗಾವಿಗೆ ಸಿಕ್ಕಿದೆ. ಬಿ.ಎಸ್. ಯಡಿಯೂರಪ್ಪನವರೇ ಈ ಹಿಂದೆ ಬೆಳಗಾವಿಗೆ ಬಂದಾಗ ಉಮೇಶ ಕತ್ತಿ ನನ್ನ ಸಂಪುಟದಲ್ಲಿ ಇರಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಉಮೇಶ್ ಕತ್ತಿಯವರನ್ನು ಸಂಪುಟ ಸೇರಿಸಿಕೊಂಡ್ರೆ ನಾಲ್ವರಲ್ಲಿ ಒಬ್ಬರು ಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
‘ಶ್ರೀಮಂತ’ರ ಮೇಲೆ ತೂಗು’ಗತ್ತಿ’?
ಬಿಜೆಪಿ ಸರ್ಕಾರದ ರಚನೆಗೆ ಕಾರಣವಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ಯಡಿಯೂರಪ್ಪ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ನೇಕಾರರ ಸಂಖ್ಯೆ ಅಧಿಕವಾಗಿದೆ. ಆದರೆ ನೇಕಾರರ ಸಮಸ್ಯೆಗೆ ಸ್ಪಂದಿಸುವ ಕೆಲಸಕ್ಕೆ ಶ್ರೀಮಂತ್ ಪಾಟೀಲ್ ಮುಂದಾಗುತ್ತಿಲ್ಲ. ಅಲ್ಲದೆ, ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಇವರಿಗೆ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಇವರು ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೆ ನಂಬಿದವರನ್ನು ಯಡಿಯೂರಪ್ಪ ಕೈಬಿಡಲ್ಲ ಎಂಬ ವಿಶ್ವಾಸದಲ್ಲಿ ಸಚಿವ ಶ್ರೀಮಂತ್ ಪಾಟೀಲ್ ಇದ್ದಾರೆ.
ಜೊಲ್ಲೆಗೆ ಕೊಕ್..?
ಒಂದು ವೇಳೆ ಶ್ರೀಮಂತ್ ಪಾಟೀಲ್ ಸಂಪುಟದಲ್ಲಿ ಉಳಿದರೆ ಸಚಿವೆ ಶಶಿಕಲಾ ಜೊಲ್ಲೆ ಸಂಪುಟದಿಂದ ಹೊರ ಹೋಗಬೇಕಾಗುತ್ತದೆ. ಇವೆಲ್ಲದರ ಜತೆಗೆ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೊಡುವುದು ಅಸಾಧ್ಯವಾದ ಮಾತು ಎನ್ನಲಾಗ್ತಿದೆ.
ಸವದಿ, ಜಾರಕಿಹೊಳಿ ಸೇಫ್..?
ಡಿಸಿಎಂ ಲಕ್ಷ್ಮಣ ಸವದಿ ಅವರು ಹೈಕಮಾಂಡ್ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮತ್ತೊಂದೆಡೆ, ಮೈತ್ರಿ ಸರ್ಕಾರದ ಪತನಗೊಂಡು ಬಿಜೆಪಿ ಸರ್ಕಾರ ರಚಿಸುವಲ್ಲಿ ರಮೇಶ್ ಜಾರಕಿಹೊಳಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಈ ಕಾರಣಕ್ಕೆ ಈ ಇಬ್ಬರೂ ನಾಯಕರು ಸಂಪುಟ ಪುನರ್ ರಚನೆ ವೇಳೆ ಸೇಫ್ ಝೋನ್‍ನಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ.