ಬೆಳಗಾವಿ: ಉಪ ಚುನಾವಣೆಗಳಲ್ಲಿ ನಮ್ಮ ಗೆಲುವಿನ ಕಾರ್ಯತಂತ್ರವನ್ನು ಬಹಿರಂಗ ಪಡಿಸಿದ್ರೆ ಪ್ರತಿಪಕ್ಷದ ನಾಯಕರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನನ್ನನ್ನು ರಾಜ್ಯ ಉಪಾಧ್ಯಕ್ಷನನ್ನಾಗಿ ನೇಮಿಸಿದೆ. ಪಕ್ಷ ಕೊಟ್ಟ ಹುದ್ದೆಯನ್ನು ಶೃದ್ಧೆಯಿಂದ ಮಾಡುತ್ತಿದ್ದೇನೆ. ನಾನು ಮಾಡುವ ಕೆಲಸದಲ್ಲಿ ನನಗೆ ಸಂತೃಪ್ತಿಯೂ ಇದೆ. ಉಪಚುನಾವಣೆಯಲ್ಲಿ ನಾವು ಮಾಡಿದ ಕಾರ್ಯತಂತ್ರದ ಬಗ್ಗೆ ಹೇಳಿದ್ರೆ, ಪ್ರತಿಪಕ್ಷಗಳು ಎಚ್ಚೆತ್ತುಕೊಳ್ಳುತ್ತವೆ. ಬಿಎಸ್‌ವೈ, ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಮೂರು ಉಪಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಲೋಕಸಭಾ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ. ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ಶ್ರದ್ಧೆಯಿಂದ ಮಾಡುವುದು ನನ್ನ ಕರ್ತವ್ಯ. ಸಿಎಂ ಬದಲಾವಣೆ ಕೇವಲ ಊಹಾಪೋಹ. ಸದ್ಯಕ್ಕೆ ಯಡಿಯೂರಪ್ಪ ತಮ್ಮ ಉಳಿದ ಅವಧಿ ಸಂಪೂರ್ಣಗೊಳಿಸುತ್ತಾರೆ. ಇದನ್ನ ಸ್ವತಃ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ ಎಂದರು.
ಇದನ್ನು ಓದಿ:ರಾಜಕೀಯ ಲಾಭಕ್ಕಾಗಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ: ಲಕ್ಷ್ಮಿ ಹೆಬ್ಬಾಳ್ಕರ್
ವಿಜಯೇಂದ್ರ ದುಡ್ಡು ಖರ್ಚು ಮಾಡೋದೆ ಸ್ಟ್ರ್ಯಾಟಜಿ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹೇಳಿಕೆ ನೀಡಿ ಕ್ಷೇತ್ರದ ಮತದಾರರನ್ನು ಅವಮಾನ ಮಾಡ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದರೆ, ಇವತ್ತು ಕಾಂಗ್ರೆಸ್‌ಗೆ ಈ ಪರಿಸ್ಥಿತಿ ಬರ್ತಿರಲಿಲ್ಲ. ಕೆಜೆಪಿಯಲ್ಲಿದ್ದ ನಾಯಕರಿಗೆ ಅತಿ ಹೆಚ್ಚು ಹುದ್ದೆ ನೀಡಲಾಗುತ್ತಿದೆ ಎಂದು ಯಾವುದೇ ನಾಯಕರು ಹೇಳಿಲ್ಲ. ಬಿಜೆಪಿ ಎಲ್ಲ ಮುಖಂಡರನ್ನು ಗುರುತಿಸಿ ಅವಕಾಶ ಕೊಟ್ಟಿದೆ. ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಸಂಪುಟ ವಿಸ್ತರಣೆ ಪುನಾರಚನೆ ಬಗ್ಗೆ ಚರ್ಚೆಯಾಗುತ್ತೆ ಎಂದು ಭಾವಿಸಿದ್ದೇನೆ. ಪ್ರತಿಪಕ್ಷಗಳಿಗೆ ಟೀಕೆ ಮಾಡಲು ಅವಕಾಶ ಸಿಗುತ್ತಿಲ್ಲ, ಹೀಗಾಗಿ ಆರೋಪ ಮಾಡ್ತಿದ್ದಾರೆ ಎಂದರು.