ಬೆಳಗಾವಿ: ಇಷ್ಟು ದಿನ ಮಾವ-ಅಳಿಯ ಮಾತ್ರ ಬೆಂಗಳೂರಿಗೆ ಹೋಗ್ತಿದ್ರು. ಆದರೆ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಗೆದ್ರೆ ಕ್ಷೇತ್ರದ ಜನರೇ ವಿಧಾನಸೌಧ ಪ್ರವೇಶಿಸಿದಂತಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕಾಲೆಳೆದಿದ್ದಾರೆ.
ಗೋಕಾಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸೌಧ ಪ್ರವೇಶ ಮಾಡಿದರೆ ಗೋಕಾಕ್ನ ಜನ ವಿಧಾನಸೌಧ ಪ್ರವೇಶಿಸಿದ ಹಾಗೆ. ಹಾಗಾಗಿ ಈ ಬಾರಿ ಜನ ನನಗೆ ಆಶೀರ್ವಾದ ಮಾಡಬೇಕು. ಇಷ್ಟು ದಿನ ಕೇವಲ ಮಾವ ಅಳಿಯಂದಿರು ಮಾತ್ರ ವಿಧಾನಸೌಧಕ್ಕೆ ಹೋಗುತ್ತಿದ್ದರು ಎಂದರು.
ವಾಲ್ಮೀಕಿ ಸಮುದಾಯದ ಸ್ವಾಮೀಜಿಯೊಬ್ಬರು ವೈಯಕ್ತಿಕ ತೇಜೋವಧೆಗೆ ಜಾರಕಿಹೊಳಿ ಸಹೋದರರು ಇಳಿಯಬಾರದು ಎಂದಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಗೋಕಾಕ್ ಜನರೆಂದರೆ ಸೌಮ್ಯ ಸ್ವಭಾವದವರು, ಹಾಗಾಗಿ ಚುನಾವಣೆಯ ಪ್ರಚಾರವನ್ನು ಅತ್ಯಂತ ಶಾಂತ ರೀತಿಯಾಗಿ ನಡೆಸುತ್ತೇವೆ. ಜನ ಯಾರಿಗೆ ಮತ ಹಾಕಬೇಕೆಂಬುದನ್ನು ತೀರ್ಮಾನಿಸುತ್ತಾರೆ ಎಂದು ಹೇಳಿದ್ರು.
ಜಾರಕಿಹೊಳಿ ಸಹೋದರರಲ್ಲಿ ಸಿಎಂ ಆಗುವ ಅರ್ಹತೆ ಯಾರಿಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರಿದ್ದಾರೆ, ಅವರಿಗೆ ಅವಕಾಶವಿದೆ, ಇವರ ಬಗ್ಗೆ ಏನು ಹೇಳೋದಿಲ್ಲ ಎಂದರು.