ಚಿಕ್ಕೋಡಿ: ಮನೆ ಮನೆಗೆ ತೆರಳಿ ಜನರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚಿಕ್ಕೋಡಿಯ ಲೋಕೋಪಯೋಗಿ ಇಲಾಖೆಯ ನೌಕರರ ಭವನದಲ್ಲಿ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತರು ಮನೆ ಮನೆಗೆ ಬಂದಾಗ ಮಾಹಿತಿ ಕೊಡುವುದು ನಮ್ಮ ಕೆಲಸ. ಕುಡಚಿ ಸೇರಿದಂತೆ ಸೋಂಕು ದೃಢಪಟ್ಟಿರುವ ಪ್ರದೇಶನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ. ಮಾಹಿತಿ ಕೇಳಿದ್ದಕ್ಕೆ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವುದು ಗಮನಕ್ಕೆ ಬಂದಿದೆ. ಅವರು ಸರ್ಕಾರದ ನಿರ್ದೇಶನ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ತೊಂದರೆ ಕೊಟ್ಟರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಲ್ಲದೇ ಆಶಾ ಕಾರ್ಯಕರ್ತರು ಮನೆಗೆ ಬಂದಾಗ ಧರ್ಮಾತೀತವಾಗಿ ಸಹಕರಿಸುವಂತೆ ಶೆಟ್ಟರ್ ಮನವಿ ಮಾಡಿದರು.