ಬೆಳಗಾವಿ: ಬಿಜೆಪಿಯನ್ನು ನಿಯಂತ್ರಣ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರಿಕೆ ಆಗುತ್ತದೆ. ಹೀಗಾಗಿ, ಕಾಂಗ್ರೆಸ್ಗೆ ಮತ ನೀಡುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಗ್ರಾಮೀಣ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಮಾಡಲಾಗಿದೆ. ಇದಕ್ಕೆ ಅಪಾರ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆ ತೆರಳಿ ಪ್ರಚಾರ ನಡೆಸಬೇಕು. ಕೈ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಬೇಕು ಎಂದು ಸಲಹೆ ನೀಡಿದರು.
ಮೂರು ವರ್ಷಗಳಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರ ಕೆಲಸಗಳನ್ನು ಗುರುತಿಸಿ, ಕಾಂಗ್ರೆಸ್ಗೆ ಮತ ನೀಡಬೇಕು. ಲೋಕಸಭೆಗೆ ಆಯ್ಕೆಯಾದ ಬಳಿಕ ಈ ಭಾಗದ ಶಾಸಕರ ಜೊತೆ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಮತ ನೀಡಬೇಕು ಎನ್ನುವುದು ನಿಮಗೂ ಗೊತ್ತಿದೆ. ತೈಲ ಬೆಲೆ, ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದು ಈ ಉಪಚುನಾವಣೆಯಲ್ಲಿ ಒಂದು ವಿಷಯವಾಗಬೇಕು. ಬಿಜೆಪಿಯನ್ನು ನಿಯಂತ್ರಣ ಮಾಡದೆ ಹೋದರೆ ಮುಂದೆ ಅಗತ್ಯ ವಸ್ತುಗಳ ಬೆಲೆ ಇನ್ನೂ ಹೆಚ್ಚಳವಾಗಲಿದೆ ಎಂದರು.
ಓದಿ: ರಾಹುಲ್ ಗಾಂಧಿ ಹುಲಿಯೋ, ಸಿಂಹವೋ ಎಂಬುದು ಫಲಿತಾಂಶದ ಬಳಿಕ ಗೊತ್ತಾಗುತ್ತೆ: ಈಶ್ವರಪ್ಪ