ಬೆಳಗಾವಿ: ಡಿಸಿಸಿ ಬ್ಯಾಂಕ್ ಮೂಲಕ ಸಹಕಾರ ಕ್ಷೇತ್ರದ ಪ್ರವೇಶದ ಕನಸು ಕಂಡಿದ್ದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸೋಲನುಭವಿಸುವ ಮೂಲಕ ಮುಖಭಂಗಕ್ಕೆ ಒಳಗಾಗಿದ್ದಾರೆ.
ಖಾನಾಪುರ ತಾಲೂಕಿನ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಬೆಳಗಾವಿಯ ಬಿಕೆ ಮಾಡೆಲ್ ಶಾಲಾ ಆವರಣದಲ್ಲಿ ಇಂದು ಚುನಾವಣೆ ನಡೆಯಿತು. ಕೊನೆಯ ಕ್ಷಣದಲ್ಲಾದ ಮ್ಯಾಜಿಕ್ನಿಂದ ಅರವಿಂದ ಪಾಟೀಲ್ ಗೆಲುವಿನ ನಗೆ ಬೀರಿದರು. 52 ಮತಗಳ ಪೈಕಿ ಇಬ್ಬರಿಗೆ ಮತ ಚಲಾವಣೆಗೆ ಅವಕಾಶ ಇರಲಿಲ್ಲ. ಇದನ್ನು ಪ್ರಶ್ನಿಸಿ ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರು ಸದಸ್ಯರ ಪರವಾಗಿ ಕೋರ್ಟ್ ಆದೇಶ ಬಂದ ಹಿನ್ನಲೆ ಆ ಇಬ್ಬರೂ ಓಡೋಡಿ ಬಂದು ಕೊನೆ ಕ್ಷಣದಲ್ಲಿ ಮತ ಚಲಾಯಿಸಿದರು. ಕೊನೆ ಕ್ಷಣದಲ್ಲಿ ಚಲಾವಣೆ ಆದ ಮತಗಳೇ ಅರವಿಂದ ಪಾಟೀಲ್ ಗೆಲುವಿಗೆ ಕಾರಣವಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಾಜಿತ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್, ಸೋಲಿನಿಂದ ನಾನೇನು ನಿರಾಸೆ ಪಟ್ಟಿಲ್ಲ. 25 ಮತಗಳು ನನ್ನ ಪರವಾಗಿ ಬಂದಿವೆ. ಎಲ್ಲರ ಆಶೀರ್ವಾದದಿಂದ ಮುಂದೆ ಕೆಲಸ ಮಾಡುತ್ತೇನೆ. ನನಗೆ 25 ಮತ್ತು ವಿರೋಧ ಪಕ್ಷಕ್ಕೆ 27 ಮತಗಳು ಬಂದಿವೆ. ಎರಡು ಮತಗಳಿಂದ ನಾನು ಸೋತಿದ್ದೇನೆ. ಕ್ರಾಸ್ ವೋಟಿಂಗ್ ಆಗಿಲ್ಲ. ನಾನು ನಂಬಿದವರು ವೋಟ್ ಮಾಡಿದ್ದಾರೆ. ನನಗೆ ಯಾವುದೇ ರೀತಿ ಹಿನ್ನಡೆಯಾಗಿಲ್ಲ. ಹೆಣ್ಣು ಮಗಳಾಗಿ ನಾನು ಇಷ್ಟು ಹೋರಾಟ ಮಾಡಿದ್ದು ಹೆಮ್ಮೆ ಅನಿಸುತ್ತಿದೆ. ಯಾಕೆ ಅವರಿಗೆ ಇಷ್ಟು ಭಯ ಇತ್ತೋ ಗೊತ್ತಿಲ್ಲ. ಅವರೆಲ್ಲಾ ಒಗ್ಗಟ್ಟಾಗಿ ಪ್ಲ್ಯಾನಿಂಗ್ ಮಾಡಿಸಿದ್ದಕ್ಕೆ ಸಕ್ಸಸ್ ಸಿಕ್ಕಿದೆ ಎಂದರು.
ಅರವಿಂದ ಪಾಟೀಲ ಮಾತನಾಡಿ, ಗೆಲುವಿನ ಬಗ್ಗೆ ನಿರೀಕ್ಷೆ ಇತ್ತು. ಮತ ಚಲಾಯಿಸಿದ ಪಿಕೆಪಿಎಸ್ ಸದಸ್ಯರಿಗೆ ಮತ್ತು ಸಹಕಾರ ನೀಡಿದ ಬಿಜೆಪಿ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ಕಳೆದ ಹದಿನೈದು ವರ್ಷದಿಂದ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಕೆಲಸ ಮಾಡಿದ್ದಕ್ಕೆ ಇಂದು ನನಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ನಮ್ಮ ರೈತರಿಗೆ ಸಹಾಯ, ಸಹಕಾರ ಮಾಡುವ ಕೆಲಸ ಮಾಡುತ್ತೇನೆ ಎಂದರು.
ಮತ ಎಣಿಕೆ ಕೇಂದ್ರದ ಹೊರಗೆ ಅರವಿಂದ ಪಾಟೀಲ ಬೆಂಬಲಿಗರು ಪಟಾಕಿ ಸಿಡಿಸಿ ಬಣ್ಣ ಎರಚಿ ಸಂಭ್ರಮಿಸಿದರು. ನಿರಾಸೆಯಿಂದ ಹೊರಟಿದ್ದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ವಾಹನ ನಿಲ್ಲಿಸಿ, ಅರವಿಂದ ಪಾಟೀಲ ಬೆಂಬಲಿಗರಿಗೆ ಶುಭ ಕೋರಿ ಮುನ್ನಡೆದರು.