ಬೆಳಗಾವಿ: ಇಂದು ನಡೆಯಲಿರುವ ಕೆಎಂಎಫ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲಿರುವ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದು, ಎಲ್ಲಾ ಸದಸ್ಯರು ಅವಿರೋಧವಾಗಿ ಬೆಂಬಲ ವ್ಯಕ್ತಪಡಿಸಲಿದ್ದಾರೆಂದು ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕಳೆದ ದಿನಗಳಿಂದ ಕೆಎಂಎಫ್ ಅಧ್ಯಕ್ಷ ಪಟ್ಟಕ್ಕಾಗಿ ಸೂಕ್ತ ತಯಾರಿ ಮಾಡಿಕೊಂಡಿದ್ದೇನೆ. ಜೊತೆಗೆ ಮುಖ್ಯಮಂತ್ರಿಗಳಿಗೆ ನನ್ನ ಅಭಿಪ್ರಾಯ ತಿಳಿಸಿದ್ದೆ. ಹಾಗಾಗಿ ಇಂದು ನಡೆಯಲಿರುವ ಕೆಎಂಎಫ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಇನ್ನು ಕೆಎಂಎಫ್ ಅಧ್ಯಕ್ಷೀಯ ಚುನಾವಣೆ ಅಖಾಡಕ್ಕೆ ಬಾಲಚಂದ್ರ ಧುಮುಕಿದಾಗಲೇ ಹಲವು ಮಹತ್ತರ ಘಟನೆಗಳು ನಡೆದುಹೋಗಿವೆ. ಕಾಂಗ್ರೆಸ್ ಪಕ್ಷದ ಶಾಸಕ ಭಿಮಾ ನಾಯಕ್ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ ಮಧ್ಯೆ ಪೈಪೋಟಿ ಏರ್ಪಟಿತ್ತು. ಆದರೆ, ಕೆಎಂಎಫ್ ಸದಸ್ಯರು ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಇದರಿಂದ ಜಾರಕಿಹೊಳಿ ಅವಿರೋಧ ಆಯ್ಕೆಯಾಗುವ ಸಂಭವ ಇದೆ ಎನ್ನಲಾಗುತ್ತಿದೆ.
ಮಾಜಿ ಸಚಿವ ರೇವಣ್ಣಗೆ ಕೈ ತಪ್ಪಿದ ಅಧ್ಯಕ್ಷ ಸ್ಥಾನ: ಸಮ್ಮಿಶ್ರ ಸರ್ಕಾರದಲ್ಲಿ ಸೂಪರ್ ಸಿಎಂ ಎಂದು ಕರೆಸಿಕೊಂಡಿದ್ದ ಹೆಚ್.ಡಿ.ರೇವಣ್ಣ ಅವರು ಎರಡು ಅವಧಿಯಲ್ಲಿ ಕೆಎಂಎಫ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕ ಭೀಮಾ ನಾಯಕ ಅಧ್ಯಕ್ಷರಾಗದಂತೆ 8 ನಿರ್ದೇಶಕರನ್ನು ಹೈಜಾಕ್ ಮಾಡಿ ಹೈದರಾಬಾದ್ಗೆ ಕರೆದುಕೊಂಡು ಹೋಗಿದ್ದರು. ಆದರೆ ಅವರಿಗೆ ಈ ಬಾರಿ ಕಲಬುರಗಿ ಹಾಲು ಒಕ್ಕೂಟದ ನಿರ್ದೇಶಕ ಮಾಲತೇಶ ಕಾಂಶಪೂರ ಅವರನ್ನು ಹೊರತುಪಡಿಸಿ ಯಾರೂ ಬೆಂಬಲ ಸೂಚಿಸುತ್ತಿಲ್ಲ ಎಂದು ಹೇಳಲಾಗಿದೆ.