ಬೆಳಗಾವಿ: ಇಬ್ಬರು ಪತ್ನಿಯರನ್ನು ಬಿಟ್ಟು ಮೂರನೇಯವಳ ಜತೆಗೆ ಮದುವೆ ಆಗಿದ್ದ ವ್ಯಕ್ತಿ ಆಕೆಯಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ತಾಲೂಕಿನ ಬಸೂರ್ತೆ ಗ್ರಾಮದ ನಿವಾಸಿ ಗಜಾನನ ನಾಯ್ಕ ಕೊಲೆಯಾದ ವ್ಯಕ್ತಿ.
ಕಳೆದ ವಾರ ನಡೆದಿದ್ದ ಈ ಹತ್ಯೆ ಪ್ರಕರಣ ಸಂಬಂಧ ಮೃತನ ಪತ್ನಿ ವಿದ್ಯಾ ಪಾಟೀಲ್, ಆಕೆಯ ಪುತ್ರ ಹೃತಿಕ್ ಹಾಗೂ ಸ್ನೇಹಿತ ಪರಶುರಾಮ ಗೋಂದಳಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಫೆ.26ರ ಮಧ್ಯರಾತ್ರಿ ಈ ಮೂವರು ಗಜಾನನ ನಾಯ್ಕನನ್ನು ಕತ್ತು ಕೊಯ್ದು ಕೊಲೆಗೈದಿದ್ದರು ಎನ್ನಲಾಗ್ತಿದೆ. ಗಜಾನನ ಅವರು ಈ ಹಿಂದೆ ಎರಡು ಮದುವೆಯಾಗಿದ್ದರು. ಆದರೆ ಇಬ್ಬರೂ ಪತ್ನಿಯರೂ ಆತನನನ್ನು ಬಿಟ್ಟು ಹೋಗಿದ್ದರು. ಬಳಿಕ ಎರಡನೇ ಪತ್ನಿಯ ಮಗನೊಂದಿಗೆ ಗಜಾನನ ಬೆಳಗುಂದಿಯಲ್ಲಿ ಬೇಕರಿ ನಡೆಸಿ ಜೀವನ ಸಾಗಿಸುತ್ತಿದ್ದರು. ಈ ವೇಳೆ ವಿಧವೆ ವಿದ್ಯಾ ಪಾಟೀಲ್ ಜತೆಗೆ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದರು.
ಬಳಿಕ ಈಕೆ ತನ್ನ ಇಬ್ಬರು ಮಕ್ಕಳ ಜೊತೆ ಗಜಾನನ ಜೊತೆಗೆ ವಾಸವಿದ್ದಳು. ಅಲ್ಲದೇ ಗಜಾನನ ಸಾಲ ಮಾಡಿ ಪತ್ನಿಗೆ ಮನೆ ಕಟ್ಟಿಸಿ ಕೊಟ್ಟಿದ್ದರಂತೆ. ಕಳೆದ ಮೂರು ವರ್ಷಗಳ ಹಿಂದೆ ವ್ಯವಹಾರದಲ್ಲಿ ನಷ್ಟವಾಗಿ ಬೇಕರಿ ಬಂದ್ ಮಾಡಿದ್ದರು.
ಆರ್ಥಿಕ ನಷ್ಟ ಹಿನ್ನೆಲೆ ಮನೆ ಮಾರಾಟ ಮಾಡಲು ಗಜಾನನ ವಿದ್ಯಾ ಪಾಟೀಲ್‌ಗೆ ಒತ್ತಾಯಿಸುತ್ತಿದ್ದರಂತೆ. ಇಲ್ಲವಾದರೆ ತನ್ನ ಜೊತೆ ಮದುವೆಯಾದ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರಂತೆ. ಹೀಗಾಗಿ ಗಜಾನನ ನಾಯ್ಕ್ ಹತ್ಯೆಗೆ ವಿದ್ಯಾ ಪಾಟೀಲ್ ಸಂಚು ರೂಪಿಸಿದ್ದಳು ಎನ್ನಲಾಗ್ತಿದೆ.
ಫೆ.26ರ ರಾತ್ರಿ ಮನೆಗೆ ಬರುತ್ತೇನೆ ನಿನ್ನ ಮಗನನ್ನು ಊರಿಗೆ ಕಳುಹಿಸು ಎಂದು ವಿದ್ಯಾ ಗಜಾನನ ಅವರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಅದರಂತೆ ಗಜಾನನ ಅವರು ಮಗನನ್ನು ಬಸೂರ್ತೆ ಗ್ರಾಮಕ್ಕೆ ಬಿಟ್ಟು ಬಂದಿದ್ದರು. ಅಂದು (ಫೆ.26) ರಾತ್ರಿ ಗಜಾನನ ನಾಯ್ಕ್ ಮನೆಗೆ ಬಂದಿದ್ದ ವಿದ್ಯಾ ಪಾಟೀಲ್ ಪತಿಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿದ್ದಾಳೆ.
ಬಳಿಕ ಪುತ್ರ ಹೃತಿಕ್ ತನ್ನ ಸ್ನೇಹಿತ ಪರಶುರಾಮ ಗೋಂದಳಿ ಜತೆಗೆ ಗಜಾನನ ಮನೆಗೆ ಮಧ್ಯರಾತ್ರಿ ಬಂದಿದ್ದಾನೆ. ಈ ವೇಳೆ ಹರಿತವಾದ ಆಯುಧದಿಂದ ಕತ್ತು ಸೀಳಿ ಗಜಾನನ ನಾಯ್ಕ್ ಹತ್ಯೆ ಮಾಡಿ, ಆತನ ಡೈರಿ, ಮೊಬೈಲ್ ಫೋನ್ ಜತೆ ಮೂವರು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಮಾರನೇ ದಿನ ಗಜಾನನ ಮಗ ಅವಧೂತ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ವಿದ್ಯಾ ಪಾಟೀಲ್ ಮೇಲೆ ಅವಧೂತ್ ಸಂಶಯ ವ್ಯಕ್ತಪಡಿಸಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅನ್ಯಧರ್ಮದ ಯುವತಿಯೊಂದಿಗೆ ವಿವಾಹ: ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ