ಬೆಳಗಾವಿ: ಲಾಕ್ಡೌನ್ ಸಡಿಲಿಕೆ ಬಳಿಕ ಜಿಲ್ಲೆಯಲ್ಲಿ ಹೋಟೆಲ್ ಉದ್ಯಮ ಮರುಚಾಲನೆ ಪಡೆದಿದ್ದು, ಸರ್ಕಾರದ ಮಾರ್ಗಸೂಚಿಗಳ ಅನ್ವಯ ಗ್ರಾಹಕರಿಗೆ ಮತ್ತೆ ಹೋಟೆಲ್ನವರು ಸವಿರುಚಿ ಉಣಬಡಿಸುತ್ತಿದ್ದಾರೆ.
ಕೊರೊನಾ ಭಯದಿಂದ ಕಳೆದೆರಡು ತಿಂಗಳಿಂದ ಬಾಗಿಲು ಮುಚ್ಚಿದ್ದ ಹೋಟೆಲ್‌ಗಳು ಈಗ ಮತ್ತೆ ಆರಂಭವಾಗಿದ್ದು ಕೋವಿಡ್-19 ನಿಯಮಾವಳಿಗಳ ಅನ್ವಯ ಕಾರ್ಯ ನಿರ್ವಹಿಸಲಿವೆ. ಇನ್ನು ಗ್ರಾಹಕರ ಸುರಕ್ಷತೆಗಾಗಿ ಹೋಟೆಲ್ಗಳಲ್ಲಿ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ಸಿಬ್ಬಂದಿಗಳು ಮತ್ತು ಗ್ರಾಹಕರಿಗೆ ಇವುಗಳ ಬಳಕೆಯನ್ನು ಕಡ್ಡಾಯ ಮಾಡಲಾಗಿದೆ.
ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಟೇಬಲ್‌ನಲ್ಲಿ ಇಬ್ಬರು ಮಾತ್ರರಿಗೆ ಅವಕಾಶ ನೀಡಲಾಗಿದೆ. ಹೋಟೆಲ್ ಉದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಮಾಲೀಕರು ಹಾಗೂ ಕಾರ್ಮಿಕರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳಗಾವಿ ನಗರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಹೋಟೆಲ್ಗಳಿದ್ದು ಹೋಟೆಲ್ ಉದ್ಯಮಗಳಿಂದ ಸುಮಾರು 20 ಸಾವಿರ ಮಂದಿ ಉದ್ಯೋಗ ಪಡೆದಿದ್ದಾರೆ.
![hotels re started after lock down](https://etvbharatimages.akamaized.net/etvbharat/prod-images/7529246_929_7529246_1591619542541.png)
ಹಾಲು, ತರಕಾರಿ, ಕಿರಾಣಿ ಮತ್ತು ಇತರೆ ಸಾಮಗ್ರಿಗಳನ್ನು ಪೂರೈಸುವವರಿಗೆ ಹೋಟೆಲ್‌ಗಳೇ ಆಸರೆಯಾಗಿರುವುದರಿಂದ ಅವರೂ ಕೂಡಾ ನೆಮ್ಮದಿಯಿಂದ ಕಾಲ ಕಳೆಯುವಂತಾಗಿದೆ. ಲಾಕ್ಡೌನ್ ಮುಗಿದರೂ ಹೋಟೆಲ್ಗೆ ಇನ್ನೂ ಗ್ರಾಹಕರು ಬರುತ್ತಿಲ್ಲ. ಮೊದಲಿನ ಸ್ಥಿತಿಗೆ ಬರಲು ಇನ್ನೂ ಕಾಲಾವಕಾಶ ಬೇಕು ಎನ್ನಲಾಗುತ್ತಿದೆ.