ಚಿಕ್ಕೋಡಿ: ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯ ಪಿಎಸ್‌ಐ ಶಿವಾನಂದ ಗುಡಗನಟ್ಟಿ, ತಮ್ಮ ಮಗಳು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರೂ ಕೂಡಾ ವಿಚಲಿತರಾಗದೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಲಾಕ್‌ಡೌನ್ ಘೋಷಿಸಿದ ಬಳಿಕ ಹುಕ್ಕೇರಿ ಠಾಣೆ ವ್ಯಾಪ್ತಿಯ ಸಂಪೂರ್ಣ ಜವಾಬ್ದಾರಿ ಪಿಎಸ್ಐ ಶಿವಾನಂದ ಗುಡಗನಟ್ಟಿ ಅವರ ಮೇಲಿತ್ತು. ತಾವೇ ಮುಂಚೂಣಿಯಲ್ಲಿ ನಿಂತು ಪೊಲೀಸರೊಂದಿಗೆ ಕೆಲಸ ನಿರ್ವಹಿಸಬೇಕಾದ ಸಂದರ್ಭ ಬಂದಾಗ ತಮ್ಮ 20 ತಿಂಗಳ ಮಗಳು ಸಾನ್ವಿಗೆ ಜ್ವರ ಹಾಗೂ ವಾಂತಿ-ಭೇದಿ ಕಾಣಿಸಿಕೊಂಡಿದೆ. ನಂತರ ಮಗಳನ್ನು ಸಂಕೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ತಮ್ಮ ಕುಟುಂಬದೊಂದಿಗೆ ಇರಬೇಕಿದ್ದ ಪಿಎಸ್‌ಐ ಗುಡಗನಟ್ಟಿ ತಮ್ಮ ಪತ್ನಿ ದೀಪಾ ಅವರನ್ನು ಆಸ್ಪತ್ರೆಯಲ್ಲೇ ಬಿಟ್ಟು ಕರ್ತವ್ಯಕ್ಕೆ ತೆರಳಿದ್ದಾರೆ. ಇನ್ನು ಪತ್ನಿ-ಪುತ್ರಿ ಆಸ್ಪತ್ರೆಯಲ್ಲಿದ್ದರೆ, ಪಿಎಸ್‌ಐ ಶಿವಾನಂದ ಸರಿಯಾಗಿ ಮನೆಗೂ ಹೋಗದೆ ಹಗಲು-ರಾತ್ರಿ ಕೊರೊನಾ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ.

ಅಲ್ಲದೆ, ತಮ್ಮ ಮಗಳು ಆಸ್ಪತ್ರೆಯಲ್ಲಿದ್ದ ಅವಧಿ ವೇಳೆಯಲ್ಲಿಯೇ ಅನೇಕ ಅಪರಾಧ ಪ್ರಕರಣಗಳನ್ನೂ ಬೇಧಿಸಿದ್ದಾರೆ. ಹುಕ್ಕೇರಿ ಠಾಣಾ ವ್ಯಾಪ್ತಿಯಲ್ಲಿ 4 ಕಳ್ಳಭಟ್ಟಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಮದಿಹಳ್ಳಿ, ಹುಲ್ಲೋಳಿ, ಬೆಲ್ಲದ ಬಾಗೇವಾಡಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದ 70ಕ್ಕೂ ಹೆಚ್ಚು ಬೈಕ್‌ಗಳನ್ನು ಸೀಜ್ ಮಾಡಿದ್ದಾರೆ. ಲಾಕ್‌ಡೌನ್ ನಿಯಮ ಉಲ್ಲಂಘನೆಯ 3 ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಂಘ ಸಂಸ್ಥೆಗಳ ನೆರವಿನಿಂದ ತಾವೇ ಹೋಗಿ ಸಂಕಷ್ಟದಲ್ಲಿದ್ದ ಬಡ ಕುಟುಂಬಗಳಿಗೆ ಆಹಾರ ವಿತರಿಸಿದ್ದಾರೆ.
ತಮ್ಮ ಕುಟುಂಬದಲ್ಲಿ ಎದುರಾಗಿದ್ದ ಸಮಸ್ಯೆಯನ್ನ ಬದಿಗಿಟ್ಟು ಲಾಕ್‌ಡೌನ್ ಯಶಸ್ವಿಗೊಳಿಸಲು ಹಗಲಿರಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗಳು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದರೂ ತಮ್ಮ ಕರ್ತವ್ಯವನ್ನು ಪಾಲನೆ ಮಾಡಿ ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.