ಬೆಳಗಾವಿ: ಜಿಲ್ಲೆಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಅಮಾನವೀಯ ಘಟನೆಗೆ ಗೃಹಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಇದಕ್ಕೂ ಮುನ್ನ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಮಹಿಳೆಯ ಆರೋಗ್ಯವನ್ನು ಗೃಹ ಸಚಿವರು ವಿಚಾರಿಸಿದರು.
ಹಲ್ಲೆಗೊಳಗಾದ ಮಹಿಳೆಯಿಂದ ಗೃಹ ಸಚಿವ ಜಿ ಪರಮೇಶ್ವರ್ ಅವರು ಘಟನೆ ಕುರಿತು ಮಾಹಿತಿ ಪಡೆದು, ಧೈರ್ಯ ತುಂಬಿದರು. ಈ ವೇಳೆ ಗೃಹಸಚಿವರೊಂದಿಗೆ ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜೊತೆಗಿದ್ದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಾ. ಜಿ. ಪರಮೇಶ್ವರ್, 24 ವರ್ಷದ ಯುವಕ ಯುವತಿಯನ್ನು ಜತೆಗೆ ಕರೆದುಕೊಂಡು ಹೋಗಿದ್ದಾನೆ. ಹುಡುಗ ಹುಡುಗಿ ಪ್ರೀತಿಸುತ್ತಿದ್ದರು ಎನ್ನುವ ಮಾಹಿತಿ ಇದೆ. ಇದರಿಂದ ಯುವಕನ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು 8 ರಿಂದ 10 ಜನ ಹಲ್ಲೆ ಮಾಡಿ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿದ್ದಾರೆ.
ಪೊಲೀಸರಿಗೆ ವಿಷಯ ತಿಳಿದ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಪೊಲೀಸರು ಈಗಾಗಲೇ 7 ಜನರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಬಂಧಿಸಬೇಕಿದೆ. ಅವರನ್ನೂ ಸಹ ಪೊಲೀಸರು ಬಂಧನ ಮಾಡುತ್ತಾರೆ ಎಂದರು. ಓಡಿ ಹೋಗಿರುವ ಯುವಕ ಯುವತಿಯನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಇಂತಹ ಘಟನೆಗಳು ಆಗಬಾರದು, ಪೊಲೀಸರಿಗೆ ದೂರು ನೀಡಿದ್ದರೆ ಪೊಲೀಸರೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಅಥವಾ ಊರಲ್ಲಿ ಹಿರಿಯರು ಮಾತನಾಡಿಕೊಂಡು ಬಗೆಹರಿಸಬಹದಿತ್ತು. ಆದರೆ ಇದೊಂದು ಅಮಾನವೀಯ ಘಟನೆ. ಸ್ಥಳಕ್ಕೂ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಗೃಹ ಸಚಿವರು ಹೇಳಿದರು.
ಗೃಹ ಸಚಿವರ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಅಜ್ಜಿ: ಮಹಿಳೆಯನ್ನು ಬೆತ್ತಲೆಗೊಳಿಸಿ ಅಮಾನವೀಯವಾಗಿ ಹಲ್ಲೆ ಮಾಡಿದ್ದರಿಂದ ಅವರ ಕುಟುಂಬಸ್ಥರು ಸೇರಿ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಘಟನೆ ಬಗ್ಗೆ ಮಾಹಿತಿ ಪಡೆಯಲು ಬಂದ ವೇಳೆ ಆ ಕುಟುಂಬದ ಅಜ್ಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಕಾಲಿಗೆ ಬಿದ್ದು ಕಣ್ಣೀರು ಹಾಕಿದರು.
ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಸಂತ್ರಸ್ತ ಮಹಿಳೆಯ ಆರೋಗ್ಯ ವಿಚಾರಿಸಿದ ಬಳಿಕ ನೇರವಾಗಿ ಮಹಿಳೆಯ ಮನೆಗೆ ಸಚಿವರು ಭೇಟಿ ನೀಡಿದ್ದರು. ಈ ವೇಳೆ ಯುವತಿಯ ಜೊತೆ ಓಡಿ ಹೋಗಿರುವ ಯುವಕನ ಅಜ್ಜಿ ಘಟನೆಯ ಬಗ್ಗೆ ಪರಮೇಶ್ವರ್ ಅವರಿಗೆ ಮಾಹಿತಿ ನೀಡಿದರು. ಈ ಸಂದರ್ಭ ಸಚಿವರ ಕಾಲಿಗೆ ಬಿದ್ದು ಅಜ್ಜಿ ಕಣ್ಣೀರು ಹಾಕಿ, ಮೈಮೇಲೆ ಇರುವ ಬಂಗಾರವನ್ನು ತೆಗೆದುಕೊಂಡು ಹೋಗಿದ್ದಾರೆ. ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಗೋಗರೆದರು. ಅಜ್ಜಿಯನ್ನು ಸಚಿವರು ಸಮಾಧಾನಪಡಿಸಲು ಯತ್ನಿಸಿದರು. ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಇದನ್ನೂ ಓದಿ: ಮಗನ ತಪ್ಪಿಗೆ ತಾಯಿಗೆ ಶಿಕ್ಷೆ; ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಮೆರವಣಿಗೆ, 7 ಜನರ ಬಂಧನ