ಬೆಳಗಾವಿ: ನಗರದ ಕ್ಲಬ್ ರಸ್ತೆಯ ಪಕ್ಕದ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ನಗರದ 11 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿ ನಾಪತ್ತೆಯಾಗಿತ್ತು.
ಇದೀಗ ಮತ್ತೆ ಭಾನುವಾರ ಕ್ಲಬ್ ರಸ್ತೆಯ ಪಕ್ಕದ ಗಾಲ್ಫ್ ಮೈದಾನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಕ್ಲಬ್ ರಸ್ತೆಯ ಪಕ್ಕದ ಸುತ್ತಮುತ್ತಲಿನ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಿ ಡಿಡಿಪಿಐ ಬಸವಾರಾಜ ನಾಲತವಾಡ ಮತ್ತು ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಆದೇಶ ಹೊರಡಿಸಿದ್ದಾರೆ.
ಹನುಮಾನ್ ನಗರ ಹಿರಿಯ ಪ್ರಾಥಮಿಕ ಶಾಲೆ, ಕುವೆಂಪು ನಗರ ಕಿರಿಯ ಪ್ರಾಥಮಿಕ ಶಾಲೆ, ಸಹ್ಯಾದ್ರಿ ನಗರ ಕಿರಿಯ ಪ್ರಾಥಮಿಕ ಶಾಲೆ, ಸದಾಶಿವನಗರ ಕಿರಿಯ ಪ್ರಾಥಮಿಕ ಶಾಲೆ, ಸದಾಶಿವನಗರ ಮರಾಠಿ ಕಿರಿಯ ಪ್ರಾಥಮಿಕ ಶಾಲೆ, ವಿವಿ ನಗರ ಹಿರಿಯ ಪ್ರಾಥಮಿಕ ಶಾಲೆ, ಕುವೆಂಪುನಗರ ಕೆಎಲ್‌ಇ ಇಂಟರ್ ನ್ಯಾಷನಲ್ ಸ್ಕೂಲ್, ವನಿತಾ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ, ಕೇಂದ್ರೀಯ ವಿದ್ಯಾಲಯ,ಮರಾಠಿ ವಿದ್ಯಾನಿಕೇತನ ಹಾಗೂ ಎನ್ಪಿಇಟಿ ಕ್ಲಬ್ ರಸ್ತೆ ಶಾಲೆಗಳಿಗೆ ರಜೆ ನೀಡಲಾಗಿದೆ.
ಚಿರತೆ ಸೆರೆ ಹಿಡಿಯಲು ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದರೂ ಈವರೆಗೂ ಅದು ಪತ್ತೆಯಾಗಿಲ್ಲ. ಆದರೆ ಭಾನುವಾರ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದ ನಾಗರಿಕರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ಮಕ್ಕಳನ್ನು ಹೊರಗೆ ಬಿಡದಂತೆ ತಿಳಿಸಲಾಗಿದೆ.
ಇದನ್ನೂ ಓದಿ: ಮಗನ ಮೇಲೆ ಚಿರತೆ ದಾಳಿ; ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು