ಬೆಳಗಾವಿ: ರಾಜ್ಯದ ನೆರೆ ಪರಿಹಾರವನ್ನು ಕೇಂದ್ರ ಸರ್ಕಾರದ ಬಳಿ ಕೇಳಲು ಎಲ್ಲಾ ಬಿಜೆಪಿ ಸಂಸದರು ವಿಫಲವಾಗಿದ್ದು, ಅವರು ಬಳೆ ತೊಟ್ಟುಕೊಳ್ಳಬೇಕು ಎಂದು ಕಾಂಗ್ರೆಸ್ ಮಹಿಳಾ ಘಟಕದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ಶಸಿಕಲಾ ಜೊಲ್ಲೆ, ನಾಲಿಗೆ ಮೇಲೆ ಹಿಡಿತ ಇಟ್ಟು ಆರೋಪ ಮಾಡಬೇಕು ಎಂದು ಗುಡುಗಿದ್ದಾರೆ.
ಇಂದು ನಗರದ ಸಾಮ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯದ ಬಿಜೆಪಿ ಸಂಸದರು ಕೇಂದ್ರದಿಂದ ಪರಿಹಾರ ತರುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ. ಸಂಸದರ ಮೇಲೆ ಆರೋಪ ಮಾಡುವುದಕ್ಕಿಂತ ಮುಂಚೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಒಬ್ಬ ಹೆಣ್ಣುಮಗಳಾಗಿ ಗಂಡಸರಿಗೆ ಬಳೆ ತೊಡಬೇಕು ಎಂದು ನೀಡಿದ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಪ್ರವಾಹದಲ್ಲಿ ಇಲ್ಲಿಯವರೆಗೆ ರಾಜ್ಯ ಹಾಗೂ ಕೇಂದ್ರದಿಂದ ಉತ್ತಮ ರೀತಿಯ ಕಾರ್ಯಗಳಾಗಿವೆ. ರಾಜ್ಯ ಸರ್ಕಾರ ಪ್ರವಾಹವನ್ನು ಸಮರ್ಪಕವಾಗಿ ಎದುರಿಸಿದೆ. ಪ್ರಾಮಾಣಿಕವಾಗಿ ಎಲ್ಲಾ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು. ಕೇಂದ್ರದಿಂದ ಹಂತ ಹಂತವಾಗಿ ಪ್ರವಾಹ ಪರಿಹಾರ ಬರುತ್ತದೆ. ಅದನ್ನು ಬಳಸಿಕೊಂಡು ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದರು.