ಬೆಳಗಾವಿ: ಮನೆಯ ಮೇಲ್ಮಹಡಿ ಮುಂಭಾಗದಲ್ಲಿ ಹೂ ಕೀಳಲು ಹೋಗಿ ಆಯತಪ್ಪಿ ನೆಲಕ್ಕೆ ಬಿದ್ದು ಮೃತಪಟ್ಟ ಹಿಂದೂ ಧರ್ಮೀಯ ಬಾಲಕಿಯ ಅಂತ್ಯಕ್ರಿಯೆಯನ್ನು ಮುಸ್ಲಿಮರು ನೆರವೇರಿಸಿದರು.
ಇಲ್ಲಿನ ವೀರಭದ್ರ ನಗರದ ನಿವಾಸಿ ವಿದ್ಯಾಶ್ರೀ ಹೆಗಡೆ (10) ಮೃತಪಟ್ಟ ಬಾಲಕಿ. ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು ತಂದೆಯ ಕುಟುಂಬಸ್ಥರು ಕಳೆದ ಹಲವು ವರ್ಷಗಳ ಹಿಂದೆಯೇ ಬೆಳಗಾವಿಯಲ್ಲಿ ಬಂದು ನೆಲೆಸಿದ್ದಾರಂತೆ.
ನಿನ್ನೆ ಮನೆಯ ಮೇಲ್ಮಹಡಿಯ ಮುಂಭಾಗ ಹೂ ಕೀಳಲು ಹೋಗಿ ನೆಲಕ್ಕೆ ಬಿದ್ದಿದ್ದಾಳೆ. ಈ ಸಂದರ್ಭದಲ್ಲಿ ಯಾರೂ ಮುಂದೆ ಬರದಿದ್ದಾಗ ಸ್ಥಳೀಯ ಮುಸ್ಲಿಂ ಮುಖಂಡರು ಗಾಯಗೊಂಡ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಮುಸ್ಲಿಮರೇ ಆಸ್ಪತ್ರೆ ಖರ್ಚು ವೆಚ್ಚವನ್ನೂ ಭರಿಸಿದ್ದಾರೆ. ಬಾಲಕಿಯ ಸಂಬಂಧಿಕರು, ಸ್ಥಳೀಯರು ಯಾರೂ ಅಂತ್ಯಕ್ರಿಯೆಗೆ ಬರದೇ ಇದ್ದಾಗ ಮುಸ್ಲಿಂ ಮುಖಂಡರು ಸ್ವತಃ ಮುಂದೆ ಬಂದು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡರು. ಸದಾಶಿವ ನಗರದಲ್ಲಿರುವ ಸ್ಮಶಾನ ಭೂಮಿಯಲ್ಲಿ ಲಿಂಗಾಯತ ಸಂಪ್ರದಾಯದಂತೆ ಬಾಲಕಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಪಾಲಿಕೆ ಸದಸ್ಯರಾದ ಬಾಬಾಜಾನ್ ಮತವಾಲೆ, ರಿಯಾಜ್ ಕಿಲ್ಲೆದಾರ್, ಇಮ್ರಾನ್ ಪತ್ತೆಖಾನ್, ಶಾಹೀದ್ ಪಠಾಣ, ಸಲ್ಮಾನ್ ಮಂಗಲಕಟ್ಟಿ, ರಾಜು ಸೇಖ್ ಭಾಗಿ, ತಟ್ಟೆ ಇಡ್ಲಿ ಹೋಟೆಲ್ ಮಾಲೀಕ್ ಶಾಂತಕುಮಾರ್ ಭಾಗಿಯಾಗಿದ್ದರು.
ಇದನ್ನೂ ಓದಿ: ಮಹಾ ಪ್ರವಾಹಕ್ಕೆ ಪಾಕಿಸ್ತಾನ ತತ್ತರ: ಹಿಂದೂ ದೇಗುಲದಲ್ಲಿ ಮುಸ್ಲಿಮರಿಗೆ ಆಶ್ರಯ