ಬೆಳಗಾವಿ: ರಾಜ್ಯದಲ್ಲಿ ನೀರು ಲಭ್ಯತೆ ದೃಷ್ಟಿಯಿಂದ ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದ್ದು, ಮಹದಾಯಿ ವಿಚಾರವಾಗಿ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಲಾಕ್ಡೌನ್ ನಂತರ ಚರ್ಚಿಸುವುದಾಗಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿಗೆ ಈಗಾಗಲೇ ಸಚಿವ ಸಂಪುಟದಲ್ಲಿ 800 ಕೋಟಿ ರೂ.ಗಳ ಅನುಮೋದನೆ ಪಡೆದುಕೊಂಡಿದೆ. ಅಲ್ಲದೇ ಡಿಪಿಆರ್ ಸಿದ್ಧಪಡಿಸಿ ಕೇಂದ್ರದ ಸಿಡಬ್ಲ್ಯುಸಿ ಬೋರ್ಡ್ಗೆ ಕಳುಹಿಸಲಾಗಿದ್ದು, ಅದು ಕ್ಲಿಯರ್ ಆದ ತಕ್ಷಣ ಇನ್ನುಳಿದ ಅಡೆತಡೆಗಳನ್ನು ಪರಿಹರಿಸಿಕೊಂಡು ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದರು.
ಇನ್ನು ಕೃಷ್ಣಾ ನದಿಗೆ ನೀರು ಬಿಡುಗಡೆಗೊಳಿಸುವ ಸಂಬಂಧ ಮಹಾರಾಷ್ಟ್ರ ಸರ್ಕಾರದ ಜತೆ ಈಗಾಗಲೇ ಫೋನ್ ಮುಖಾಂತರ ಎರಡರಿಂದ ಮೂರು ಭಾರಿ ಚರ್ಚೆ ಮಾಡಿದ್ದು, ಲಾಕ್ಡೌನ್ ಹಿನ್ನೆಲೆ ಸಚಿವರು, ಸರ್ಕಾರ ಬ್ಯೂಸಿಯಾಗಿರುವುದರಿಂದ ಚರ್ಚಿಸಲು ಆಗಿಲ್ಲ. ಲಾಕ್ಡೌನ್ ಮುಗಿದ ನಂತರ ಚರ್ಚಿಸಿ ಕೃಷ್ಣಾ ನದಿಗೆ ನೀರು ಬಿಡುಗಡೆಗೆ ಮನವಿ ಮಾಡಲಾಗುವುದು.
ರಾಜ್ಯ ಹಿತದೃಷ್ಟಿಯಿಂದ ಕೃಷ್ಣಾ ನದಿಗೆ ನೀರು ಬಿಡುಗಡೆಗೆ ಎಲ್ಲ ಪ್ರಯತ್ನಗಳು ನಡೆದಿವೆ. ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮುಖಾಮುಖಿ ಚರ್ಚೆ ಮಾತ್ರ ಬಾಕಿ ಉಳಿದಿದ್ದು, ಅಲ್ಲಿನ ನೀರಾವರಿ ಸಚಿವ ಪಾಟೀಲರ ಜತೆಗೆ ಶೀಘ್ರದಲ್ಲೇ ಚರ್ಚಿಸುವುದಾಗಿ ತಿಳಿಸಿದರು.