ಅಥಣಿ/ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆ ಪರಿಣಾಮ, ಕೃಷ್ಣಾ ನದಿ ಉಗಮ ಸ್ಥಾನ ಕೊಯ್ನಾ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ನೀರು ಬಿಡಲಾಗಿದ್ದು, ಅಥಣಿ ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಅಥಣಿ ತಾಲೂಕಿನಲ್ಲಿ 40 ಕಿಲೋಮಿಟರ್ಗೂ ಹೆಚ್ಚು ಪ್ರದೇಶದಲ್ಲಿ ಕೃಷ್ಣಾ ನದಿ ಹರಿಯುತ್ತಿದೆ. ನದಿತೀರದ ಗ್ರಾಮಗಳಾದ ಝುಂಜರವಾಡ, ಶಿರಹಟ್ಟಿ, ಸವದಿ, ಖವಟಗೊಪ್ಪ, ಅವರಕೋಡ್, ಸಪ್ತಸಾಗರ, ನದಿ ಇಂಗಳಗಾಂವ, ತಿರ್ಥ, ಮಹಿಸವಾಡಗಿ, ಜನವಾಡ, ಸವದಿ ದರ್ಗಾ, ದರೂರ, ಹಲ್ಯಾಳ, ನಾಗನೂರ ಪಿಕೆ, ನಂದೇಶ್ವರ, ಸತ್ತಿ, ಶೇಗುಣಸಿ, ಹುಲಗಬಾಳ ಸೇರಿ ಒಟ್ಟು ಹದಿನೆಂಟು ಗ್ರಾಮಗಳಲ್ಲಿ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಮತ್ತೆ ನದಿ ತೀರದ ಜನರಲ್ಲಿ ಆತಂಕ ಮನೆ ಮಾಡಿದೆ.
ಮುಂಜಾಗ್ರತಾ ಕ್ರಮವಾಗಿ ನದಿ ತೀರದ ಗ್ರಾಮದ ಜನರು ಎಚ್ಚರಿಕೆಯಿಂದಿರಬೇಕು ಎಂದು ತಾಲೂಕು ಆಡಳಿತವು ಡಂಗೂರ ಬಾರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಕೆಲ ಪಂಚಾಯಿತಿ ಸಿಬ್ಬಂದಿ ಗ್ರಾಮಗಳಲ್ಲಿ ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ.
ಕೃಷ್ಣಾ ನದಿಗೆ 1,31,500 ಕ್ಕೂ ಅಧಿಕ ಕ್ಯೂಸೆಕ್ ನೀರು ಒಳ ಹರಿವು
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಕೃಷ್ಣಾ, ವೇದ್ಗಂಗಾ ಮತ್ತು ದೂಧ್ಗಂಗಾ ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. 1,31,500 ಕ್ಕೂ ಅಧಿಕ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಒಳ ಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ್ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,02,000 ಕ್ಯೂಸೆಕ್ ನೀರು ಹಾಗೂ ದೂಧ್ಗಂಗಾ ನದಿಯಿಂದ 29,920 ಕ್ಯೂಸೆಕ್ ನೀರು ಸೇರಿ ಒಟ್ಟು 1,31,500 ಕ್ಯೂಸೆಕ್ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ.
ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ - 64.8 ಮಿ.ಮೀ, ಅಂಕಲಿ - 48.2 ಮಿ.ಮೀ, ನಾಗರಮುನ್ನೊಳಿ - 35.6 ಮಿ.ಮೀ, ಸದಲಗಾ - 88.4 ಮಿ.ಮೀ ಹಾಗೂ ಜೋಡಟ್ಟಿಯಲ್ಲಿ 30.4 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ. ಈಗಾಗಲೇ ಚಿಕ್ಕೋಡಿ ಉಪವಿಭಾಗದ ಏಳು ಸೇತುವೆಗಳು ಜಲಾವೃತಗೊಂಡಿವೆ.
ಕೃಷ್ಣಾ, ವೇದ್ಗಂಗಾ ಹಾಗೂ ದೂಧ್ಗಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗದ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಅಲ್ಲದೇ ನದಿ ನೀರಿನ ಮಟ್ಟದಲ್ಲಿ ಸತತ ಏರಿಕೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯಭಾಗ, ಅಥಣಿ ತಾಲೂಕಿನ ನದಿ ತೀರದಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.
ಮಳೆ ನಡುವೆ ಹೆಸ್ಕಾಂ ಸಿಬ್ಬಂದಿ ಕರ್ತವ್ಯ ಪ್ರಜ್ಞೆ
ಇನ್ನೊಂದೆಡೆ ಕಳೆದ ಹಲವು ದಿನಗಳಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯ ನಡುವೆಯೇ ಹೆಸ್ಕಾಂ ಇಲಾಖೆಯ ಪವರ್ ಮ್ಯಾನ್ ಒಬ್ಬರು ಕೆಲಸ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಳಗಾವಿ ನಗರಕ್ಕೆ ಸವ್ಗಾಂವ್- ಮಾಂಡೋಳಿ ಹಾಗೂ ದೇವಗಿರಿ -ಕಡೋಲಿ, ನಂದಿಹಳ್ಳಿ-ನಾಗೇನಟ್ಟಿ, ಸುಳೇಬಾವಿ-ಮೋದಗಾ ಸೇತುವೆಗಳು ಜಲಾವೃತಗೊಂಡಿವೆ. ಜೊತೆಗೆ ನಗರದಲ್ಲಿ ಹಲವು ಮರಗಳು ನೆಲಕ್ಕೆ ಅಪ್ಪಳಿಸಿವೆ. ಹೀಗಾಗಿ ಜಿಲ್ಲೆಯಲ್ಲಿ ಕೆಲವು ಕಡೆ ವಿದ್ಯುತ್ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಧಾರಾಕಾರ ಸುರಿಯುವ ಮಳೆಯ ನಡುವೆ ಹೆಸ್ಕಾಂ ಇಲಾಖೆ ಸಿಬ್ಬಂದಿಯೊಬ್ಬ ಮಾಂಡೋಳಿ -ಸವ್ಗಾಂವ್ ಸೇತುವೆ ರಸ್ತೆಯ ಬಳಿ ಮಳೆಯಲ್ಲಿ ಟಿಸಿ ಕಂಬ ಏರಿ ಕೆಲಸ ಮಾಡಿದ್ದಾರೆ. ಪವರ್ ಮ್ಯಾನ್ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಅಷ್ಟೇ ಆತಂಕಕ್ಕೂ ಕಾರಣವಾಗಿತ್ತು.