ಚಿಕ್ಕೋಡಿ/ಗೋಕಾಕ್: ರಾತ್ರಿಯೆಲ್ಲಾ ಚಿಕ್ಕೋಡಿ ಹಾಗೂ ಗೋಕಾಕ್ ತಾಲೂಕಿನಾದ್ಯಂತ ಭಾರಿ ಮಳೆ ಸುರಿದಿದ್ದು, ಮಳೆ ನೀರಿನ ರಭಸಕ್ಕೆ ಚಿಕ್ಕೋಡಿಯಲ್ಲಿ ವಾಹನಗಳು ಕೊಚ್ಚಿ ಹೋಗಿವೆ. ಅದಲ್ಲದೆ ಕೆಲವೆಡೆ ಡಾಂಬರು ರಸ್ತೆ ಕುಸಿದಿದ್ದರೆ, ಗೋಕಾಕ್ನಲ್ಲಿ ಬಸ್ ನಿಲ್ದಾಣವೇ ಮುಳುಗಡೆಯಾಗಿದೆ
ರಾತ್ರಿಯೆಲ್ಲಾ ಸುರಿದ ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಬೇಡಕಿಹಾಳ ಗ್ರಾಮದ ಬಳಿ ಡಾಂಬರು ರಸ್ತೆ ಬಾಯ್ಬಿಟ್ಟಿದ್ದು, ಭೋಜ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಜನರು ಇದೇ ಬಿರುಕು ಬಿಟ್ಟರುವ ರಸ್ತೆಯ ಮೇಲೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ. ಇನ್ನು ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹಳ್ಳದಲ್ಲಿ ಮಳೆಯ ರಭಸಕ್ಕೆ 5 ಕಾರು ಹಾಗೂ 4 ಬೈಕ್ ಗಳು ಕೊಚ್ಚಿಕೊಂಡು ಹೋಗಿದ್ದು, ನಜ್ಜುಗುಜ್ಜಾಗಿವೆ.
ಗೋಕಾಕ್ ತಾಲೂಕಿನಲ್ಲೂ ವರುಣನ ಅಬ್ಬರ ಮುಂದುವರೆದಿದ್ದು, ಹಲವು ಹಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳದಿಂದ ಮನೆ-ಅಂಗಡಿ, ಹೊಲಕ್ಕೆ ನೀರು ನುಗ್ಗಿದ್ದು, ಯಾದವಾಡ ಗ್ರಾಮದ ಬಸ್ ನಿಲ್ದಾಣವೂ ಸಹ ಮುಳುಗಡೆಯಾಗಿದೆ. ಕೊಣ್ಣೂರಿನ ಗ್ಯಾಸ್ ಗೋದಾಮಿಗೆ ನೀರು ನುಗ್ಗಿದ್ದರಿಂದ ಸಿಲಿಂಡರ್ಗಳನ್ನು ಹೊರ ತೆಗೆಯಲು ಕಾರ್ಮಿಕರು ಹರಸಾಹಸಪಟ್ಟರು.