ಬೆಳಗಾವಿ: ಕಳೆದೆರಡು ದಿನಗಳಿಂದ ಕುಂದಾನಗರಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಮಹಾತ್ಮಾಗಾಂಧಿ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ಚರಂಡಿಗಳು ತುಂಬಿ ಹರಿಯುತ್ತಿವೆ. ಚರಂಡಿಗಳನ್ನು ಸ್ವಚ್ಛ ಮಾಡದೇ ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರಿದ್ದು, ಪರಿಣಾಮ ಚರಂಡಿ ನೀರು ಮಳೆಗಳಿಗೆ ನುಗ್ಗಿ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ. ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮನೆಗಳಿಗೆ ಹೊಕ್ಕಿರುವ ನೀರನ್ನು ಹೊರಹಾಕಲು ಕುಟುಂಬ ಸದಸ್ಯರು ಹೈರಾಣಾಗುತ್ತಿದ್ದಾರೆ. ಇಷ್ಟೆಲ್ಲ ಅವಾಂತರ ಎದುರಾದರೂ ಪಾಲಿಕೆ ಸಿಬ್ಬಂದಿ ಮಾತ್ರ ಸ್ಥಳಕ್ಕೆ ಆಗಮಿಸದೇ ಬೇಜವಾಬ್ದಾರಿ ತೋರುತ್ತಿದ್ದಾರೆ. ಮಳೆಯಿಂದ ನಗರದಲ್ಲಿ ಸಂಚಾರ ಸಮಸ್ಯೆಯಾಗುತ್ತಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.