ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಕಳೆದ 3-4 ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ ಕರ್ನಾಟಕದ ವೇದಗಂಗಾ, ದೂಧಗಂಗಾ, ಕೃಷ್ಣಾ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ನದಿ ತೀರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಎರಡು ಸೇತುವೆಗಳು ಮುಳುಗಡೆಯಾಗಿವೆ. ಬೋಜ್-ಕಾರದಗಾ ಗ್ರಾಮದ ನಡುವಿನ ಕೆಳ ಸೇತುವೆ ಹಾಗೂ ಕುನ್ನೂರ-ಬಾರವಾಡ ಗ್ರಾಮದ ನಡುವಿನ ಸೇತುವೆ ಮುಳುಗಡೆಯಾಗಿದೆ.
ಓದಿ:ಕೊಡಗಿನಲ್ಲಿ ನಿರಂತರ ಮಳೆ: ನದಿ, ಜಲಾಶಯದಲ್ಲಿ ನೀರಿನ ಹರಿವು ಹೆಚ್ಚಳ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗ್ರಾಮಗಳಲ್ಲಿ ಸೇತುವೆ ಮೇಲಿಂದ ನೀರು ಹರಿಯುತ್ತಿರುವ ಹಿನ್ನೆಲೆ ಸೇತುವೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಸ್ಥಳಕ್ಕೆ ನಿಪ್ಪಾಣಿ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೇತುವೆ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಸೇತುವೆ ರಸ್ತೆ ಉಪಯೋಗಿಸದಂತೆ ಸ್ಥಳೀಯರಿಗೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.