ಚಿಕ್ಕೋಡಿ: ಕಳೆದ ಹದಿನೈದು ದಿನಗಳಿಂದ ಸತತವಾಗಿ ಚಿಟಿಕೆ ಮಳೆ ಸುರಿಯುತ್ತಿದ್ದು ಮನೆಗೋಡೆ ಕುಸಿದು ಯುವಕ ಸಾವನ್ನಪ್ಪಿರುವ ಘಟನೆ ಅಥಣಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ತಾಸೆ ಗಲ್ಲಿಯ ನಿವಾಸಿ ಕಾಶಿನಾಥ ಅಪ್ಪಾಸಾಬ ಸುತಾರ (23) ಮೃತರೆಂದು ಗುರುತಿಸಲಾಗಿದೆ. ತನ್ನ ತಂದೆ ತಾಯಿ ಹಾಗೂ ಸಹೋದರನನ್ನು ಮನೆಯಿಂದ ಹೊರಕಳಿಸಿ ತಾನು ಹೊರಬರುವ ಹೊತ್ತಿಗೆ ಹಠಾತ್ ಮೈಮೇಲೆ ಮಣ್ಣು, ಕಲ್ಲು ಬಿದ್ದು ಯುವಕ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಅಥಣಿ ಪಿಎಸ್ಐ ಹಾಗೂ ಸಿಪಿಐ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮನೆಗೋಡೆ ಕುಸಿದು ವೃದ್ಧೆ ಸಾವು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಕುಸಿದು ವೃದ್ಧೆ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ನಡೆದಿದೆ. ಕೋಗಳಿ ಗ್ರಾಮದ ನಾಗಮ್ಮ (60) ಮೃತರೆಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮನೆ ಗೋಡೆ ಕುಸಿದುಬಿದ್ದು ಗಂಭೀರ ಗಾಯಗೊಂಡಿದ್ದ ವೃದ್ಧೆಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ರಾತ್ರಿ 10.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ನಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತರಿಗೆ ಪರಿಹಾರ ಘೋಷಿಸಿದ ಸಿಎಂ: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಪಾರ ಆಸ್ತಿ ಹಾನಿಯ ಜೊತೆಗೆ ಹಲವಾರು ಜೀವಗಳೂ ಪ್ರಾಣ ಕಳೆದುಕೊಂಡಿವೆ. ಇದುವರೆಗೆ 38ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
ನಿನ್ನೆ ಸುದ್ದಿಗಾರರ ಜೊತೆಗೆ ಮಾತನಾಡಿದ್ದ ಸಿಎಂ, ರಾಜ್ಯಕ್ಕೆ ಮುಂಗಾರು ತಡವಾಗಿ ಕಾಲಿಟ್ಟರೂ ಭಾರಿ ಮಳೆಯಾಗುತ್ತಿದೆ. ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವೆಡೆ ಪ್ರವಾಹ ಉಂಟಾಗಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. 38ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಒಂದಷ್ಟು ಮನೆಗಳು ಸಂಪೂರ್ಣವಾಗಿ ಕುಸಿದುಬಿದ್ದರೆ ಇನ್ನೊಂದಷ್ಟು ಮನೆಗಳಿಗೆ ಹಾನಿಯಾಗಿದೆ. ರೈತರ ಬೆಳೆ ನಾಶ, ಜಾನುವಾರು ನಷ್ಟ ಸಂಭವಿಸಿದೆ. ಮಳೆ ಸಂಬಂಧಿಸಿದ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದರು.
ಇದನ್ನೂ ಓದಿ: Karnataka rains: ಇನ್ನೆರಡು ದಿನ ಭಾರಿ ಮಳೆ; ಹಾವೇರಿ, ರಾಯಚೂರು, ದಕ್ಷಿಣ ಕನ್ನಡದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ