ಗೋಕಾಕ್: ಬೆಳಗಾವಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ನಗರದ ಮಲ್ಲಿಕಾರ್ಜುನ ಗುಡ್ಡದ ಮೇಲಿನ ಬಂಡೆಗಳು ಕುಸಿಯುವ ಹಂತದಲ್ಲಿವೆ.
ಶುಕ್ರವಾರದಿಂದ ಸತತ ಮಳೆಯಾಗುತ್ತಿದೆ. ಭಾನುವಾರ ತಡ ರಾತ್ರಿ ಜೋರಾಗಿ ಶಬ್ದ ಕೇಳಿಬಂದಿತ್ತು, ಬಳಿಕ ಅಲ್ಲಿಗೆ ತೆರಳಿದಾಗ ಗುಡ್ಡದ ನಿವಾಸಿಗಳಿಗೆ ಬಂಡೆಕಲ್ಲುಗಳು ಕುಸಿದಿದ್ದು ಗಮನಕ್ಕೆ ಬಂದಿದೆ.
ಇದರ ಪರಿಣಾಮ ಗುಡ್ಡದ ಕೆಳಗಿನ ಭಾಗದ ಮನೆಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಭೂ ಕುಸಿತಕ್ಕೆ ಭಾರಿ ಗಾತ್ರದ ಬಂಡೆಗಲ್ಲು ಉರುಳುವ ಸಾಧ್ಯತೆಗಳಿವೆ. ಇನ್ನು ಬಂಡೆಗಲ್ಲು ಉರುಳಿ ಬಂದ್ರೆ ನೂರಕ್ಕೂ ಅಧಿಕ ಮನೆಗಳು ನೆಲಸಮವಾಗಿ ಸಾವು-ನೋವು ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ ಜನರಲ್ಲಿ ಆತಂಕ ಮನೆ ಮಾಡಿದ್ದು, ಈ ಬಗ್ಗೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಹಿಸುವುದು ಅಗತ್ಯವಾಗಿದೆ.