ಬೆಳಗಾವಿ: ಬೇಸಿಗೆಯಲ್ಲೂ ವರುಣ ಅಬ್ಬರಿಸುವ ಮೂಲಕ ಕುಂದಾನಗರಿ ಜನರಿಗೆ ತಂಪರೆದಿದ್ದಾನೆ. ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ನಗರದ ಮಂದಿಗೆ ಇಂದು ಸಂಜೆ ಸುರಿದ ಅಕಾಲಿಕ ಮಳೆ ತುಸು ತಂಪೆರೆಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನ ಬೇಗೆ ನಗರವಾಸಿಗಳನ್ನು ಕಂಗೆಡುವಂತೆ ಮಾಡಿತ್ತು. ಸಂಜೆ ಭಾರಿ ಗಾಳಿ ಸಮೇತ ಮಳೆ ಸುರಿಯಿತು.
ಮಳೆ ಸಹಿತ ಗಾಳಿಗೆ ಬೃಹತ್ ಮರವೊಂದು ಉರಳಿಬಿದ್ದ, ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಒಂದು ಜೀಪ್, ಒಂದು ಆಟೋ, ದ್ವಿಚಕ್ರ ವಾಹನ ಜಖಂಗೊಂಡಿವೆ. ಮಳೆ ಗಾಳಿಗೆ ಕಾಂಗ್ರೆಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಮುಂಭಾಗದ ಗಾಜು ಕೂಡ ಪುಡಿ ಪುಡಿಯಾಗಿವೆ. ನಗರದಲ್ಲಿ ಹಲವೆಡೆ ಸುರಿದ ಮಳೆಗೆ ವಾಹನ ಸವಾರರು ಪರದಾಟ ನಡೆಸಬೇಕಾಯಿತು.
ಮಳೆಯಿಂದ ಮರ ಉರಳಿದ್ದಕ್ಕೆ ಕೆಲಹೊತ್ತು ಸಂಚಾರ ಸಮಸ್ಯೆ ಉಂಟಾಯಿತು. ನಂತರ ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ ನಂತರ ಮರವನ್ನು ತೆರವುಗೊಳಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಉಳಿದಂತೆ ಮಳೆಗೆ ಯಾವುದೇ ಪ್ರಾಣಹಾನಿ ಆಗಿಲ್ಲ.