ಚಿಕ್ಕೋಡಿ: ಗಡಿ ಭಾಗದಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನ ಮತ್ತೆ ಆತಂಕಕ್ಕೊಳಗಾಗಿದ್ದಾರೆ.
ಕೃಷ್ಣಾ ನದಿ ಜಲಾನಯನ ಪ್ರದೇಶಗಳಲ್ಲಿ ಮತ್ತು ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಕಳೆದೆರೆಡು ದಿನಗಳಿಂದ ಮತ್ತೆ ವರುಣ ಅಬ್ಬರಿಸುತ್ತಿದ್ದಾನೆ. ಇದರಿಂದಾಗಿ ಕೃಷ್ಣಾ ಮತ್ತು ಉಪನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ ಹಾಗೂ ನಿಪ್ಪಾಣಿ ಭಾಗದ ರೈತರು ಮಳೆಯಿಂದಾಗಿ ಕಂಗಾಲಾಗಿದ್ದಾರೆ. ಇನ್ನೆರಡು ದಿನ ಹೀಗೆ ಮಳೆ ಮುಂದುವರೆದರೆ ಕೃಷ್ಣೆಯ ಒಡಲು ತುಂಬಲಿದೆ.
ಈಗಾಗಲೇ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಕಲ್ಲೋಳ ಸೇತುವೆ ಜಲಾವೃತಗೊಂಡಿದೆ. ಹೀಗೆ ಕೃಷ್ಣಾ ನದಿ ನೀರಿನಲ್ಲಿ ಏರಿಕೆಯಾದರೆ ಕೆಳ ಹಂತದ ಮೂರ್ನಾಲ್ಕು ಸೇತುವೆಗಳು ಮುಳಗಡೆಯಾಗುವ ಸಾಧ್ಯತೆಯಿದೆ.