ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಗಿಡ, ನಾಟಿ ಮಾಡಿರುವ ಕಬ್ಬು ಹಾಗೂ ಇನ್ನಿತರ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ.
ತಾಲೂಕಿನಲ್ಲಿ ನಿನ್ನೆ ರಾತ್ರಿ ಸುಮಾರು 10ಗಂಟೆಗೆ ಪ್ರಾರಂಭವಾಗಿದ್ದ ಮಳೆ ನಸುಕಿನ ಜಾವ 5ಗಂಟೆವರೆಗೆ ಅಬ್ಬರಿಸಿತು. ಪರಿಣಾಮವಾಗಿ ಅಥಣಿ ತಾಲೂಕಿನ ಹಳ್ಳಕೊಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಯಲ್ಲಮ್ಮವಾಡಿಯ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನ ಜಲಾವೃತವಾಗಿದೆ.
ಇನ್ನು, ಅಥಣಿ ಮತ್ತು ಜಮಖಂಡಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಝುಂಜರವಾಡ-ತುಬಚಿ ರಸ್ತೆ ಮಾರ್ಗ, ಮಳೆ ನೀರಿನಿಂದ ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಇಡೀ ರಾತ್ರಿ ಸುರಿದ ಮಳೆಗೆ ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಪರದಾಡುವಂತಾಗಿತ್ತು.
ಕೆಲವು ಗ್ರಾಮಗಳಲ್ಲಿ ದನದ ಕೊಟ್ಟಿಗೆಗೆ ನೀರು ನುಗ್ಗಿದ ಪರಿಣಾಮ ನೀರಿನಲ್ಲಿ ಮುಳುಗುತ್ತಿದ್ದ ದನ ಕರುಗಳನ್ನು ರಕ್ಷಿಸಲಾಗಿದೆ. ಮಳೆಯ ರಭಸಕ್ಕೆ ರೈತರ ಬೆಳೆಗಳು ಕೊಚ್ಚಿ ಹೋಗಿವೆ.