ಚಿಕ್ಕೋಡಿ: ಬೆಳೆಗಳೆಲ್ಲವೂ ಭರಪೂರ ಬಂದಿದ್ದು, ಇನ್ನೇನು ಕಟಾವು ಮಾಡಬೇಕೆಂದು ಕೆಲ ರೈತರು ಯೋಚಿಸಿದರೆ, ಕೆಲ ರೈತರು ಫಸಲಿಗೆ ಬಂದ ಬೆಳೆಗಳನ್ನು ಕಟಾವು ಮಾಡಿ ರಾಶಿ ಮಾಡಲು ಮುಂದಾದ ಸಂದರ್ಭದಲ್ಲೇ ಕುಂಭದ್ರೋಣ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದ ರೈತರು ಕಂಗಾಲಾಗಿದ್ದಾರೆ.
ಕಳೆದ ಎರಡು-ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮಳೆಯ ಜೊತೆಗೆ ಗಾಳಿಯೂ ಸಹಿತ ಜೋರಾಗಿ ಬೀಸುತ್ತಿರುವ ಪರಿಣಾಮ ಗೋವಿನ ಜೋಳ ಹಾಗೂ ಕಬ್ಬಿನ ಬೆಳೆ ನೆಲಸಮವಾಗಿವೆ. ಈ ಬಾರಿ ಮಳೆ ಸರಿಯಾದ ವೇಳೆಗೆ ಆದ ಪರಿಣಾಮ ಮುಂಗಾರು ಬೆಳೆಗಳು ಚೆನ್ನಾಗಿ ಬಂದಿವೆ. ಇನ್ನೇನು ಬೆಳೆಗಳನ್ನು ಕಟಾವು ಮಾಡಿ ರಾಶಿ ಮಾಡಿ ಜಮೀನು ಸ್ವಚ್ಛಗೊಳಿಸಿ ಹಿಂಗಾರು ಬೆಳೆಗಳಾದ ಗೋಧಿ, ಕಡಲೆ, ತಂಬಾಕು ಬೆಳೆಯಲು ಸಜ್ಜಾದ ರೈತ ಭಾರೀ ಮಳೆಯಿಂದ ಕಂಗಾಲಾಗಿದ್ದಾನೆ.
ಮುಂಗಾರು ಹಂಗಾಮಿನ ಸೋಯಾಬಿನ್, ಹೆಸರು, ಗೋವಿನ ಜೋಳ, ತೊಗರಿ, ಶೇಂಗಾ ಈ ಬೆಳೆಗಳ ಜೊತೆ ತರಕಾರಿಗಳು ಕಟಾವಿಗೆ ಬಂದಿದ್ದು, ಎಲ್ಲಾ ಬೆಳೆಗಳು ಈಗ ಹಾಳಾಗಿವೆ. ಈ ಮಳೆಯಿಂದ ಕಬ್ಬು ಸಾಗಣೆ ಮತ್ತು ಕಟಾವಿಗೂ ಸಮಸ್ಯೆಯಾಗಿದೆ.