ಬೆಳಗಾವಿ: ಜಿಲ್ಲೆಯಾದ್ಯಂತ ಮತ್ತೆ ಮಹಾ ಮಳೆ ಮುಂದುವರೆದಿದೆ. ಒಂದೇ ರಾತ್ರಿಯಲ್ಲಿ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡ ಕೃಷ್ಣಾ ನದಿಯ ಒಳಹರಿವು ಸುಮಾರು 15 ಅಡಿಯಷ್ಟು ಹೆಚ್ಚಾಗಿದ್ದು, ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಸೇತುವೆ ಸಂಪೂರ್ಣ ಮುಳುಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಎರಡು ಕೆಳ ಹಂತದ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಕೃಷ್ಣಾ ನದಿಯ ಕಲ್ಲೋಳ-ಯಡೂರ ಬ್ರಿಡ್ಜ್ ಕಂ ಬ್ಯಾರೇಜ್, ವೇದಗಂಗಾ ನದಿಯ ಕಾರದಗಾ ಬೋಜ ಸೇತುವೆ ಮುಳುಗಡೆಯಾಗಿವೆ. ಭಾರೀ ಮಳೆಯಿಂದ ಜಿಲ್ಲೆಯ ಕೆಲವಡೆ ಪ್ರವಾಹ ಭೀತಿ ಎದುರಾಗಿದ್ದು, ಬೆಳಗಾವಿ-ರಾಮದುರ್ಗ ಮಧ್ಯದ ನಾಲ್ಕು ಪ್ರಮುಖ ರಸ್ತೆ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಮಲಪ್ರಭಾ ನದಿ ನೀರು ತುಂಬಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ.
ಇನ್ನು ಮಳೆಯ ರೌದ್ರ ನರ್ತನಕ್ಕೆ ಆಟಿಕೆ ವಸ್ತುಗಳಂತೆ ನೀರಲ್ಲಿ ಕಾರು, ಜೀಪುಗಳು ತೇಲಿ ಹೋಗಿವೆ. ನಿಪ್ಪಾಣಿ, ಸಂಕೇಶ್ವರ, ರಾಯಬಾಗ, ಅಥಣಿ, ಚಿಕ್ಕೋಡಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ರಸ್ತೆಗಳೂ ಸಂಪೂರ್ಣ ಜಲಾವೃತವಾಗಿವೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ರಾಮದುರ್ಗ-ಕೊಣ್ಣೂರ, ರಾಮದುರ್ಗ- ಕಟಕೋಳ, ಕಟಕೋಳ-ಮುನವಳ್ಳಿ, ಸುರೇಬಾನ್-ಕುಲಗೇರಿ ರಸ್ತೆ ಸಂಪರ್ಕ ಸ್ಥಗಿತಗೊಳಿಸಲು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದೇಶಿಸಿದ್ದಾರೆ.