ಬೆಳಗಾವಿ: ಕೇಂದ್ರ ಸರ್ಕಾರದ ಬಜೆಟ್‍ಗೆ ಇನ್ನು ಎರಡೇ ದಿನ ಬಾಕಿಯಿದ್ದು, ದೇಶದಲ್ಲಿ ಕೋವಿಡ್ ಅಟ್ಟಹಾಸ ನಿಯಂತ್ರಿಸಲು ಆರೋಗ್ಯ ಇಲಾಖೆ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿದೆ. ಮುಂಬರುವ ದಿನಗಳಲ್ಲಿ ಕೊರೊನಾ 2ನೇ ಅಲೆ ಹರಡುವ ಭೀತಿ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸಾಧ್ಯವಾದಷ್ಟು ವೇಗದಲ್ಲಿ ದೇಶವಾಸಿಗಳಿಗೆ ವ್ಯಾಕ್ಸಿನ್ ವಿತರಿಸಬೇಕಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇತರ ರಾಷ್ಟ್ರೀಯ ಯೋಜನೆ ಜಾರಿಗಾಗಿ ಪ್ರತೀ ವರ್ಷ ಮೀಸಲಿಡುವ ಅನುದಾನದ ಜೊತೆಗೆ ಕೋವಿಡ್ ನಿಯಂತ್ರಣಕ್ಕಾಗಿ ಇನ್ನೂ ಹೆಚ್ಚಿನ ಅನುದಾನ ಮೀಸಲಿಡಬೇಕಿದೆ.
ಇತರೆ ಹಣ ಕೋವಿಡ್ ನಿಯಂತ್ರಣಕ್ಕೆ ಬಳಕೆ: 2019-20 ಹಾಗೂ 2020-21ರ ಬಜೆಟ್‍ನಲ್ಲಿ ಆರೋಗ್ಯ ಇಲಾಖೆಯ ಇತರ ಕಾರ್ಯಗಳಿಗೆ ಮಂಜೂರಾದ ಅನುದಾನವನ್ನು ಕೋವಿಡ್ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗಿದೆ. ರಾಷ್ಟ್ರೀಯ ಯೋಜನೆಗಳಾದ ಕುಟುಂಬ ಯೋಜನೆ, ಕ್ಯಾನ್ಸರ್ ನಿವಾರಣೆ ಸೇರಿದಂತೆ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಪ್ರತೀ ವರ್ಷ ಕೋಟ್ಯಂತರ ರೂಪಾಯಿ ಮೀಸಲಿಡುತ್ತಾ ಬಂದಿದೆ. ಕಳೆದ ಎರಡೂ ಬಜೆಟ್‍ಗಳ ಈ ಅನುದಾನವನ್ನು ಕೋವಿಡ್‍ಗೆ ಉಪಯೋಗಿಸಿಕೊಳ್ಳಲಾಗಿದೆ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಯೋಜನೆ ಜೊತೆಗೆ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ...ಬಜೆಟ್‍ನಲ್ಲಿ ರೇಷ್ಮೆ ವಲಯದ ಅಭಿವೃದ್ಧಿಗೆ ಸಿಗುತ್ತಾ ಹಲವು ಯೋಜನೆಗಳು?
ವ್ಯಾಕ್ಸಿನ್ ಹಂಚಿಕೆ, ಪ್ರೋತ್ಸಾಹಧನದ ಹೊರೆ: ಕೋವಿಡ್ ನಿಯಂತ್ರಣದಲ್ಲಿ ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ವೈದ್ಯಕೀಯ ಸಿಬ್ಬಂದಿಯ ಸಂಬಳದಲ್ಲಿ ಶೇ. 5ರಷ್ಟು ಹೆಚ್ಚಿಸಿದೆ. ಅಲ್ಲದೇ ಇದೀಗ ಕೊರೊನಾ ವಾರಿಯರ್ಸ್‍ಗೂ ಉಚಿತ ಲಸಿಕೆ ವಿತರಣೆ ಮಾಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ ಉಚಿತ ಲಸಿಕೆ ವಿತರಿಸುವ ಯೋಜನೆ ಇದೆ. ಜೊತೆಗೆ ವ್ಯಾಕ್ಸಿನ್ ಹಂಚಿಕೆ ಹಾಗೂ ಪ್ರೋತ್ಸಾಹಧನದ ಹೊರೆಯೂ ಸರ್ಕಾರದ ಮೇಲಾಗಲಿದೆ.
ಇಲಾಖೆಯಲ್ಲಿ ನಿಂತ ನೀರಾದ ಅಭಿವೃದ್ಧಿ ಕಾರ್ಯ: ಮಂಜೂರಾದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ, ಆರೋಗ್ಯ ಇಲಾಖೆಯ ಕಟ್ಟಡಗಳ ನವೀಕರಣ, ದುರಸ್ತಿ ಕಾರ್ಯ ಹೀಗೆ ಅನೇಕ ಕಾರ್ಯಗಳಿಗೆ ಸರ್ಕಾರದಿಂದ ಹಣ ಮಂಜೂರು ಮಾಡಿತ್ತು. ಕೋವಿಡ್‍ಗೆ ಹೆಚ್ಚಿನ ಹಣದ ಅಗತ್ಯದ ಕಾರಣಕ್ಕೆ ಈ ಎಲ್ಲಾ ಅನುದಾನ ಕೋವಿಡ್ ನಿರ್ಮೂಲನೆಗೆ ಬಳಸಲಾಯಿತು. ಹೀಗಾಗಿ ಆರೋಗ್ಯ ಇಲಾಖೆಯ ಅಭಿವೃದ್ಧಿ ಕಾರ್ಯಗಳು ಕೊರೊನಾ ಹೊಡೆತಕ್ಕೆ ನಿಂತ ನೀರಾಗಿದೆ. ಬರುವ ಬಜೆಟ್‍ನಲ್ಲಿ ಈ ಎಲ್ಲಾ ಕಾರ್ಯಕ್ಕೆ ಹಣ ಮೀಸಲಿಡುವ ಅನಿವಾರ್ಯತೆ ಇದೀಗ ಎರಡೂ ಸರ್ಕಾರಗಳ ಮುಂದಿದೆ.