ಬೆಳಗಾವಿ : ಕೇಂದ್ರದ ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕ ಬಳಿಕ ಮಹದಾಯಿ ಮತ್ತು ಮೇಕೆದಾಟು ಯೋಜನೆ ಕಾಮಗಾರಿ ಆರಂಭಿಸಲು ಯಾವುದೇ ತಕರಾರು ಇರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ಬೆಳಗಾವಿಯ ಕೊಂಡಸಕೊಪ್ಪ ಗುಡ್ಡದ ಪ್ರತಿಭಟನಾ ಟೆಂಟ್ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮನವಿ ಸ್ವೀಕರಿಸಿ ಮಾತನಾಡಿದರು. ಈಗ ನಾನು ಇಲ್ಲಿಗೆ ಬರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ. ಅವರ ಬೇಡಿಕೆಗಳು ಏನೇನಿವೆ ಎಂದು ತಿಳಿದುಕೊಂಡು ಬಾ, ಕುಳಿತು ಚರ್ಚೆ ಮಾಡಿ, ಏನೆಲ್ಲಾ ಮಾಡಬಹುದು ನಿರ್ಧರಿಸೋಣ ಅಂತಾ ಹೇಳಿದ್ದಾರೆ ಎಂದರು.
ನಾನು ಪಿಯುಸಿ ವರೆಗೆ ಕೃಷಿ ಮಾಡಿದ್ದೇನೆ. ಹಾಗಾಗಿ ಅದರ ಸ್ವಲ್ಪ ಕಷ್ಟಗಳು ನನಗೆ ಗೊತ್ತಿದೆ. ಇಲ್ಲಿ ಪ್ರಮುಖವಾಗಿ ಹಾಲಿನ ದರ ಹೆಚ್ಚಳ, ಕೃಷಿ ಕಾಯ್ದೆ ವಾಪಸ್, ಎಂಎಸ್ಪಿ ಶಾಸನಬದ್ಧ ಕಾಯ್ದೆ ಜಾರಿ, ಬರಗಾಲದ ತುರ್ತು ಕಾರ್ಯಕ್ರಮಗಳು ಜಾರಿ, ಸೆಪ್ಟೆಂಬರ್ 22ರ ವಿದ್ಯುತ್ ಕಾಯ್ದೆ ವಾಪಸ್, ಕಬ್ಬಿಗೆ ಎಫ್ಆರ್ಪಿ ಜೊತೆ ಎಸ್ಎಪಿ ನೀಡುವುದು, ತೆಂಗಿಗೆ ವಿದೇಶಿದಿಂದ ಬರುವ ಉತ್ಪನ್ನಕ್ಕೆ ಆಮದು ಸುಂಕ ಹೆಚ್ಚಳ ಇಲ್ಲವಾದರೆ ಪ್ರತಿ ಕ್ವಿಂಟಾಲ್‌ಗೆ 25 ಸಾವಿರ ರೂ. ನಿಗದಿ ಮಾಡಬೇಕು. ಬಗರ್ ಹುಕುಂ ಸಾಗುವಳಿ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸಲು ಮನವಿ ಮಾಡಿಕೊಳ್ಳಲಾಗಿದೆ. ಇವುಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಸಚಿವರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಕೂಡ ರೈತ ಸಂಘದಿಂದಲೇ ಬಂದವರು. ಹಾಗಾಗಿ, ರೈತರಿಗೆ ಅನ್ಯಾಯ ಆಗಲು ನಮ್ಮ ಸರ್ಕಾರ ಬಿಡುವುದಿಲ್ಲ. ರೈತರ ನೆರವಿಗೆ ಬರುವುದು ಸರ್ಕಾರದ ಕರ್ತವ್ಯ ಯಾಕೆಂದರೆ ಭಾರತದ ಆರ್ಥಿಕತೆಯ ಬೆನ್ನೆಲುಬು. ಹಾಗಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದು ಮಹಾದೇವಪ್ಪ ಭರವಸೆ ನೀಡಿದರು.
ಇದನ್ನೂ ಓದಿ : ಅರಣ್ಯದಲ್ಲಿ ಶೇ.40ರಷ್ಟು ಕಳೆ, ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತಿರುವುದು ನಿಜ : ಅರಣ್ಯ ಸಚಿವ ಈಶ್ವರ ಖಂಡ್ರೆ