ಅಥಣಿ (ಬೆಳಗಾವಿ) : ತಾಲೂಕಿನ ತಂಗಡಿ ರಸ್ತೆ ಬಲಬದಿಗಿರುವ ಜಮೀನಿಗೆ ಹಲ್ಯಾಳ ಏತ ನೀರಾವರಿಯ ವಿತರಣಾ ಕಾಲುವೆ ಮುಖಾಂತರ ಹೆಚ್ಚಾದ ನೀರು ರೈತರ ಜಮೀನುಗಳಿಗೆ ಹರಿದು ಬರುತ್ತಿದೆ. ಇದರಿಂದಾಗಿ ರೈತರ ಬೆಳೆ ಕೊಚ್ಚಿಕೊಂಡು ಹೋಗುತ್ತಿದೆ. ಆದಷ್ಟು ಬೇಗ ಕಾಲುವೆ ಸರಿಪಡಿಸುವಂತೆ ಒತ್ತಾಯಿಸಿ ನೀರಾವರಿ ಇಲಾಖೆ ಅಭಿಯಂತರ ಬಿ ಎಸ್ ಚಂದ್ರಶೇಖರ್ ಅವರಿಗೆ ತಂಗಡಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಈ ವೇಳೆ ರೈತ ಪ್ರಕಾಶ್ ಕದಮ್ ಮಾತನಾಡಿ, ಹಲ್ಯಾಳ ಏತ ನೀರಾವರಿಯ ವಿತರಣಾ ಕಾಲುವೆ ಕೆಲಸವನ್ನ ಗುತ್ತಿಗೆದಾರ 2011-2012ನೇ ಸಾಲಿನಲ್ಲಿ ಅರ್ಧದಲ್ಲಿ ಬಿಟ್ಟಿದ್ದು, ಜಮೀನಿನಲ್ಲಿ ಕಾಲುವೆ ಅಗೆತ ಮಾಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ತಿಳಿಸಲಾಗಿದೆ. ಅವರು, ಕಾಲುವೆ ಕುರಿತು ಟೆಂಡರ್ ಕರೆದು ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, 7-8 ವರ್ಷವಾದರೂ ಕೂಡ ಕೊಟ್ಟ ಭರವಸೆ ಈಡೇರಿಸಿಲ್ಲ.
ಪ್ರತಿ ವರ್ಷ ಕಾಲುವೆಯಿಂದ ನೀರು ಬಿಟ್ಟಾಗ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.