ಬೆಳಗಾವಿ: ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ನೇತೃತ್ವದಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಇಂದು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ಪ್ರತಿಭಟನೆ ನಡೆಯಿತು.
ಹಿಂದಿನ ಸರ್ಕಾರ ಅಭಿವೃದ್ಧಿ ನಿಗಮ ಘೋಷಿಸಿದ್ದು, ನಿಗಮಕ್ಕೆ ಕೂಡಲೇ 50 ಕೋಟಿ ಅನುದಾನ ನೀಡಬೇಕು. ಇದಕ್ಕೆ ನಮ್ಮವರನ್ನೆ ಅಧ್ಯಕ್ಷರನ್ನಾಗಿ ನೇಮಿಸಬೇಕು. ಅಲ್ಲದೇ ನಿಗಮದಲ್ಲಿ ಹಡಪದ ಸಮಾಜದ ಉಪನಾಮಗಳನ್ನು ಸೇರಿಸಬೇಕು. 2002ರ ಕರ್ನಾಟಕ ಸರ್ಕಾರಿ ಆದೇಶದಲ್ಲಿ ಪ್ರವರ್ಗ-2ಎ ಅಡಿ ಬರುವ 8ಎ ದಲ್ಲಿ ತೆಗೆದು ಹಾಕಿರುವ ಕ್ಷೌರಿಕರಿಗೆ ಕರೆಯುವ ಮೂಲನಾಮ ನಾಯಿಂದವನ್ನು ಪುನಃ ಸೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ವಿಶ್ವವಿದ್ಯಾಲಯದಿಂದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಹಡಪದ ಸಮಾಜಕ್ಕೆ ನ್ಯಾಯ ಕೊಡಿಸಬೇಕು. ಕಾಂತರಾಜು ನೇತೃತ್ವದ ಜಾತಿಗಣತಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಹಡಪದ ಅಪ್ಪಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಮಸಬಿನಾಳ, ಲಿಂಗಮ್ಮನವರ ಜನ್ಮಸ್ಥಳ ದೇಗಿನಹಾಳ ಸ್ಥಳಗಳನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸಬೇಕು. ಹಡಪದ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯಿಸಿದರು.
ಸೌಲಭ್ಯಗಳಿಂದ ಹಡಪದ ಸಮಾಜ ವಂಚಿತ: ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅನ್ನದಾನಿ ಭಾರತಿ ಅಪ್ಪಣ ಸ್ವಾಮೀಜಿ, "ಹಡಪದ ಸಮಾಜ ಸೌಲಭ್ಯಗಳಿಂದ ವಂಚಿತವಾಗಿ ನಲುಗಿ ಹೋಗಿದೆ. ಎಲ್ಲ ಸರ್ಕಾರಗಳು ನಮ್ಮನ್ನು ಲೆಕ್ಕಕ್ಕೆ ಇಟ್ಟಿಲ್ಲ. ನಮ್ಮ ಮಾತು ಕೇಳದ ಕಿವುಡು ಸರ್ಕಾರಗಳು ಆಡಳಿತಕ್ಕೆ ಬರುತ್ತಿವೆ. ಈಗಲೂ ನಮಗೆ ನ್ಯಾಯ ಸಿಗದಿದ್ದರೆ ಮುಂದಿನ ಹೋರಾಟ ಸುದೀರ್ಘವಾಗಿರುತ್ತದೆ. ಯಾವ ರೀತಿ ಇರುತ್ತದೆ ಎಂದು ಹೇಳುವುದಿಲ್ಲ ಮಾಡಿ ತೋರಿಸುತ್ತೇವೆ" ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಸಮಾಜದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ ಮಾತನಾಡಿ, "ಬಸವ ಕಲ್ಯಾಣದಲ್ಲಿ ಬಸವಣ್ಣನವರ ಅರಿವಿನ ಗವಿಯ ಪಕ್ಕ ಇದ್ದ ಹಡಪದ ಅಪ್ಪಣ್ಣನವರ ನಾಮಫಲಕ ಕಿತ್ತು ಅಪಮಾನ ಮಾಡಿದ್ದಾರೆ. ನಮ್ಮದು ಸಣ್ಣ ಸಮಾಜ ಯಾರೂ ಕೇಳುವವರಿಲ್ಲ ಎಂದು ಮಾಡಿದ್ದಾರೋ?, ಬೇರೆ ರಾಜ್ಯದಿಂದ ಬಂದ ಕ್ಷೌರಿಕರನ್ನು ಮತಬ್ಯಾಂಕ್ ಮಾಡಿಕೊಂಡು ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಕ್ಷೌರಿಕ ವೃತ್ತಿ ಸೇವೆ ಎಂದು ತಿಳಿದು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ. ಮುಂದೆ ನಮ್ಮ ಹೋರಾಟ ಉಗ್ರವಾಗಿ ಇರುತ್ತದೆ" ಎಂದರು.
ಪ್ರತಿಭಟನೆಯಲ್ಲಿ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ, ಕಾರ್ಯಾಧ್ಯಕ್ಷರಾದ ಡಾ ಹೆಚ್.ಡಿ.ವೈದ್ಯ, ನಾಗರಾಜ ಸರ್ಜಾಪುರ, ಬಸವರಾಜ ಹಡಪದ, ಪಿ. ಹಾಲಪ್ಪ, ಖಜಾಂಚಿ ಮಂಜಪ್ಪ ಹಡಪದ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ: ಬರ ಪರಿಹಾರ ಕಡಿಮೆ ಮಾಡಿದ್ದಕ್ಕೆ ಕಿಡಿ; ಸರ್ಕಾರಕ್ಕೆ ತಲಾ 1 ಸಾವಿರ ರೂ. ಕೊಡಲು ಮುಂದಾದ ಹಾವೇರಿ ರೈತರು