ಬೆಳಗಾವಿ: ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಆಗಮಿಸಿದ ವೀರ ಯೋಧನಿಗೆ ಗ್ರಾಮಸ್ಥರು ಹಾಗೂ ಕುಟುಂಬದವರು ಅದ್ಧೂರಿ ಸ್ವಾಗತ ಕೋರಿದರು.
ಹಿರೇಬಾಗೇವಾಡಿ ಗ್ರಾಮದ ನಿವಾಸಿ ನಿವೃತ್ತ ಯೋಧ ಶಿವರುದ್ರಪ್ಪ ದನದಮನಿ ಅವರ ಪುತ್ರ ಚಂದ್ರಶೇಖರ ದನದಮನಿ ಕೋರ್ ಆಫ್ ಸಿಗ್ನಲ್ ರೆಜಿಮೆಂಟ್ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಸೇನೆಯಲ್ಲಿ 17 ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರ, ಅಸ್ಸೋಂ, ಮಧ್ಯಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸಿ ಬುಧವಾರ ಗ್ರಾಮಕ್ಕೆ ಆಗಮಿಸಿದರು. ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಸ್ನೇಹಿತರು ಹಾಗೂ ಕುಟುಂಬದವರು ಸ್ವಾಗತಿಸಿ ಅಭಿನಂದಿಸಿದರು. ನಂತರ ಗ್ರಾಮಕ್ಕೆ ಬಂದ ನಂತರ ಆರತಿ ಬೆಳಗಿ ಮೆರವಣಿಗೆ ಮೂಲಕ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಪುತ್ರ ದೇಶ ಸೇವೆ ಮಾಡಿ ನಿವೃತ್ತಿಯಾಗಿ ಬಂದಿರುವುದು ಪೋಷಕರ ಸಂಭ್ರಮ ಹೆಚ್ಚಿಸಿತ್ತು.
ನಿವೃತ್ತ ಯೋಧ ಚಂದ್ರಶೇಖರ ದನದಮನಿ ಮಾತನಾಡಿ, ತಂದೆಯವರು ಸೇನೆಯಲ್ಲಿದ್ದರು. ಅವರ ಶಿಸ್ತಿನ ಜೀವನ ನನಗೆ ಪ್ರೇರಣೆಯಾಗಿತ್ತು. ಅವರ ಆಸೆಯಂತೆ ನಾನೂ ಕೂಡ ಭಾರತ ಮಾತೆಯ ಸೇವೆ ಸಲ್ಲಿಸಿದ್ದೇನೆ. ಉದ್ಯೋಗದಿಂದ ನಿವೃತ್ತಿಯಾಗಿದ್ದು, ಸೈನ್ಯ ನೀಡಿದ ಶಿಸ್ತು, ಸೇವೆ, ರಾಷ್ಟ್ರಾಭಿಮಾನ ಜೀವನದ ಕೊನೆಯವರೆಗೂ ಇರುತ್ತದೆ. ನನ್ನಿಬ್ಬರು ಮಕ್ಕಳಲ್ಲಿ ಒಬ್ಬನಾದರೂ ದೇಶ ಸೇವೆಗಾಗಿ ಸೈನ್ಯ ಸೇರಬೇಕು ಎನ್ನುವುದು ನನ್ನ ಆಸೆ. ದೇಶ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರೆಯುವುದಿಲ್ಲ. ನನಗೆ ದೊರೆತಿದ್ದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.