ಬೆಳಗಾವಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿರುವ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಸರಕೋಡ ಗ್ರಾಮದಲ್ಲಿ ನಡೆದಿದೆ.

ಗ್ರಾಮ ಪಂಚಾಯಿತ ಸದಸ್ಯನಾಗಿದ್ದ ಬಸವರಾಜ್ ದೊಡ್ಡಮನಿ ಮೃತ ದುರ್ದೈವಿ. ಈತ ದೇವಗಾಂವ್ ಗ್ರಾಮದಲ್ಲಿ ಸದಸ್ಯನಾಗಿದ್ದ. ಮನೆಯಲ್ಲಿ ಅತ್ತೆ, ಸೊಸೆ ಇದ್ದ ಮನೆಗೆ ನುಗ್ಗುತ್ತಿದ್ದ ಬಸವರಾಜ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿತ್ತು. ನಿನ್ನೆ ತಡರಾತ್ರಿ ಬಂದು ಕಿರುಕುಳ ನೀಡುತ್ತಿದ್ದ ಬಸವರಾಜ ದೊಡ್ಡಮನಿ ಕಣ್ಣಿಗೆ ಅತ್ತೆ, ಸೊಸೆ ಸೇರಿ ಖಾರದ ಪುಡಿ ಎರಚಿ ಬಳಿಕ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮೃತ ವ್ಯಕ್ತಿಯ ತಾಯಿ ಗಂಗಮ್ಮ, ರಾತ್ರಿ 10 ಗಂಟೆಗೆ ಮನೆಯಲ್ಲಿ ಊಟ ಮಾಡಿ ಹೊರಗಡೆ ಹೋಗಿದ್ದು, ಯಾರು ಕೊಲೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ತಮ್ಮ ಅಳಲು ಹೊರಹಾಕಿದ್ದು, ಆತ ಅಂತಹ ವ್ಯಕ್ತಿ ಅಲ್ಲ ಎಂದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಬಸವರಾಜನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿಸಿತ್ತು. ಚಿಕಿತ್ಸೆ ಫಲಿಸದೇ ಗ್ರಾ.ಪಂ.ಸದಸ್ಯ ಬಸವರಾಜ ದೊಡ್ಡಮನಿ ಮೃತಪಟ್ಟಿದ್ದಾನೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.