ಚಿಕ್ಕೋಡಿ(ಬೆಳಗಾವಿ)/ವಿಜಯಪುರ: ಹಿರೇಕೋಡಿಯ ಕಾಮಕುಮಾರ ನಂದಿ ಮಹಾರಾಜರಿಗೆ ಆದ ಸ್ಥಿತಿ ಬೇರೆ ಯಾರಿಗೂ ಬರಬಾರದು. ಈ ದೃಷ್ಟಿಯಿಂದ ಸರ್ಕಾರ ಜೈನ ಧರ್ಮದ ಮುನಿಗಳಿಗೆ ಭದ್ರತೆ ನೀಡಬೇಕು ಎಂದು ನಾಂದನಿ ಹಾಗೂ ವರುಣಾ ಮಠದ ಭಟ್ಟಾರಕ ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಬೆಟ್ಟದಲ್ಲಿ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನಾಂದನಿ ಮಠದ ಜೀನಸೇನಾ ಭಟ್ಟಾರಕ ಹಾಗೂ ವರುಣಾ ಮಠದ ಧರ್ಮಸೇನಾ ಭಟ್ಟಾರಕ ಶ್ರೀಗಳು ಮಾಧ್ಯಮಗಳ ಜೊತೆ ಮಾತನಾಡಿದರು. "ನಾವು ಕಷ್ಟ ಬಂದರು ಯಾರಿಗೂ ನೋಯಿದೆ ಜೀವನ ಮಾಡುತ್ತೇವೆ. ನಮಗೆ ಇವತ್ತು ಇಂತಹ ಕಷ್ಟ ಬಂದಿದೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು. ಸಾಧು ಸಂತರಿಗೆ ಸರ್ಕಾರ ರಕ್ಷಣೆ ನೀಡಬೇಕು. ಇಂತಹ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಜೈನ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ: ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಪಕ್ಕದ ಗದ್ದೆಯಲ್ಲಿ ಜೈನ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ. ನಾಂದನಿ ಮಠದ ಜೀನಸೇನಾ ಭಟ್ಟಾರಕ ಹಾಗೂ ವರುಣಾ ಮಠದ ಧರ್ಮಸೇನಾ ಬಟ್ಟಾರಕ ಶ್ರೀಗಳು ಸ್ಥಳವನ್ನು ನಿಗದಿ ಮಾಡಿದ್ದರು.
ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ಜೈನ ಮುನಿ: ಜೈನ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ
ಮುಗಿಲು ಮುಟ್ಟಿದ ಭಕ್ತರ ಆಕ್ರಂದನ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರು ಕಳೆದ 2 ದಿನದ ಹಿಂದೆ ಭೀಕರವಾಗಿ ಹತ್ಯೆಗೀಡಾಗಿದ್ದರು. ಇಂದು ಚಿಕ್ಕೋಡಿಯ ಹಿರೇಕೋಡಿಯ ನಂದಿ ಬೆಟ್ಟದಲ್ಲಿ ಶ್ರೀಗಳ ಅಂತ್ಯಸಂಸ್ಕಾರ ನೆರವೇರಿತು. ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಅಂತ್ಯಕ್ರಿಯೆಯ ವೇಳೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು. .
ಜೈನ ಮುನಿ ಹತ್ಯೆ ಖಂಡನೀಯ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ವಿಜಯಪುರ ಜಿಲ್ಲೆಯ ಮನಗೂಳಿ ಮಠದ ಸಂಗನಬಸವ ಶ್ರೀಗಳು ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯಾವುದೇ ಧರ್ಮದ ಸ್ವಾಮೀಜಿಗಳಾದರೂ ಅವರವರ ಧರ್ಮದ ಉಳಿವಿಗಾಗಿ ಶ್ರಮಿಸುತ್ತಾರೆ. ಭಕ್ತರು ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತಾರೆ. ಆದರೆ ಅಂತಹವರನ್ನು ಇಂದು ಬರ್ಬರವಾಗಿ ಹತ್ಯೆ ಮಾಡಿರುವುದು ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸ್ವಾಮೀಜಿಗಳ ಹತ್ಯೆಯಾದರೇ ಹೇಗೆ?. ರಾಜ್ಯದಲ್ಲಿ ಸ್ವಾಮೀಜಿಗಳಿಗೆ ರಕ್ಷಣೆ ಎಲ್ಲಿದೆ ಎಂದು ಮನಗೂಳಿ ಶ್ರೀಗಳು ಪ್ರಶ್ನಿಸಿದರು. ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಉಸ್ತುವಾರಿ ಸಚಿವರು ಸುಮ್ಮನೆ ಕೂರಬಾರದು. ಸರ್ಕಾರ ತಕ್ಷಣವೇ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮುನಿಗಳ ಹಂತಕರನ್ನು ಗಲ್ಲಿಗೇರಿಸಬೇಕು. ಹಿರಿಯ ಮುನಿಗಳು, ಜೈನ ಸಮುದಾಯದ ಭಕ್ತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ: ಹೆಚ್ಚಿನ ಮುತುವರ್ಜಿ ವಹಿಸಿ ತನಿಖೆ ನಡೆಸುತ್ತಿದ್ದೇವೆ- ಬೆಳಗಾವಿ ಎಸ್ಪಿ