ಬೆಳಗಾವಿ: ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ಜಿಲ್ಲೆಗೆ ಇನ್ನೂ ಹೆಚ್ಚು ಸಚಿವ ಸ್ಥಾನಗಳನ್ನು ನೀಡಬೇಕಾಗಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಚಿವ ಸಂಪುಟದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಗೆ ಎಷ್ಟು ಸಚಿವ ಸ್ಥಾನ ಕೊಡಬೇಕು, ಆ ಜಿಲ್ಲೆಯಲ್ಲಿ ಎಷ್ಟು ಶಾಸಕರಿದ್ದಾರೆ ಎಂಬುದನ್ನು ಸರ್ಕಾರ ನಡೆಸುವವರು ವಿಚಾರಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನೂ ಕೆಲವರಿಗೆ ಸಚಿವ ಸ್ಥಾನ ನೀಡಿದರೇ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಕೂಡ ಆಗ್ರಹ ಮಾಡುತ್ತೇವೆ ಎಂದರು.
ಸರ್ಕಾರದ ಆಡಳಿತಾವಧಿ ಮುಂದಿನ ಕೆಲವೇ ತಿಂಗಳಾಗಿರುವುದರಿಂದ ಮತ್ತೆ ಜಿಲ್ಲೆಗೆ ಸಚಿವ ಸ್ಥಾನ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ. ಸರ್ಕಾರ ಹಾಗೂ ಮುಖ್ಯಮಂತ್ರಿಗಳೇ ಈ ಬಗ್ಗೆ ಉತ್ತರ ಕೊಡಬೇಕು. ವಿರೋಧ ಪಕ್ಷದವರಾಗಿ ನಾವು ಈ ಬಗ್ಗೆ ಮಾತನಾಡಲು ಆಗುವುದಿಲ್ಲ ಎಂದರು.
ಮೊಟ್ಟೆ ಹಗರಣ ತನಿಖೆಯಾಗಲಿ
ಮೊಟ್ಟೆ ಹಗರಣದ ಆರೋಪ ಎದುರಿಸುತ್ತಿರುವ ಶಶಿಕಲಾ ಜೊಲ್ಲೆ ಅವರಿಗೆ ಮತ್ತೆ ಮಂತ್ರಿಸ್ಥಾನ ನೀಡಲಾಗಿದೆ. ಅವರು ಮತ್ತಷ್ಟು ಪ್ರಬಲರಾಗಿದ್ದಾರೆ. ಅವರ ಮೇಲಿನ ಹಗರಣದ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದರು.
ಜೊಲ್ಲೆ ಅವರು ಸಚಿವರಾಗುವುದಕ್ಕಿಂತ ಮುಂಚೆಯೇ ಜೀರೋ ಟ್ರಾಫಿಕ್ನಲ್ಲಿ ಆಗಮಿಸಿದ್ದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅಧಿಕಾರವನ್ನು ಯಾವ ರೀತಿ ಬೇಕಾದರೂ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.