ಬೆಳಗಾವಿ : ಎಥೆನಾಲ್ ದರ ನಿಶ್ಚಿತವಿಲ್ಲದೇ ದರ ಏರಿಳಿತ ಕಂಡರೆ ಬಂಡವಾಳ ಹೂಡಿಕೆ ಮಾಡಿರುವ ಕಾರ್ಖಾನೆ ಮಾಲೀಕರಿಗೆ ಆರ್ಥಿಕ ತೊಂದರೆಯಾಗಲಿದ್ದು, ದರ ನಿಗದಿ ಹಾಗೂ ಅವಧಿಯ ಬಗ್ಗೆ ಸ್ಪಷ್ಟತೆ ತರಬೇಕಿರುವ ಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ(ಕೆಎಸ್ಬಿಡಿಬಿ) ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ (ಕೆಎಸ್ಸಿಎಸ್ಟಿ) ಆಶ್ರಯದಲ್ಲಿ ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜೈವಿಕ ಇಂಧನ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜೈವಿಕ ಇಂಧನ ಉತ್ಪಾದನೆ ಅತ್ಯಗತ್ಯವಾಗಿದ್ದು, ಸ್ಥಳೀಯವಾಗಿ ಉತ್ಪಾದನೆಯಿಂದ ಇಂಧನ ಆಮದು ಪ್ರಮಾಣವನ್ನು ಕಡಿಮೆಗೊಳಿಸಬಹುದು. ಜೈವಿಕ ಇಂಧನ ಉತ್ಪಾದನೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ,ಸೌಲಭ್ಯಗಳನ್ನು ನೀಡಲು ಸರ್ಕಾರ ಬದ್ಧವಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿವೆ. ಎಥೆನಾಲ್ಗೆ ಪ್ರತ್ಯೇಕ ದರ ನಿಗದಿಪಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಸಚಿವ ಸುರೇಶ್ ಅಂಗಡಿ ಅವರಿಗೆ ಮನವಿ ಮಾಡಿಕೊಂಡರು.
ಎಥೆನಾಲ್ ದರ ನಿಗದಿಪಡಿಸಿದ ಬಳಿಕ ಎಷ್ಟು ವರ್ಷದ ಮಟ್ಟಿಗೆ ದರ ನಿಗದಿಪಡಿಸಲಾಗಿರುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರೆ ಸಕ್ಕರೆ ಕಾರ್ಖಾನೆಗಳಿಂದ ಎಥೆನಾಲ್ ಉತ್ಪಾದನೆಗೆ ಅನುಕೂಲವಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಸಹಾಯಧನ - ಮಾದರಿ ಯೋಜನೆ ರೂಪಿಸಲು ಸಲಹೆ :
ಜೈವಿಕ ಇಂಧನ ಉತ್ಪಾದನೆಗೆ ಸಂಬಂಧಿಸಿದಂತೆ ಯಾವ ರೀತಿಯ ಯೋಜನೆ ರೂಪಿಸಬಹುದು ಎಂಬುದರ ಬಗ್ಗೆ ತಜ್ಞರು ಸ್ಪಷ್ಟ ಅಭಿಪ್ರಾಯ ನೀಡಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.
ಜಗತ್ತಿನಲ್ಲಿ ಈಗಿರುವ ಇಂಧನ ಸಂಪನ್ಮೂಲ ಗರಿಷ್ಠ ನಲವತ್ತು ವರ್ಷಕ್ಕೆ ಸಾಕಾಗಬಹುದು. ಆದ್ದರಿಂದ ಜೈವಿಕ ಇಂಧನ ಉತ್ಪಾದನೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡಲಿದೆ. ಎರಡು ದಿನಗಳ ಜೈವಿಕ ಇಂಧನ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಹೊರ ಹೊಮ್ಮುವ ನಿರ್ಣಯ ಇಡೀ ದೇಶಕ್ಕೆ ಮಾದರಿಯಾಗಿರಬೇಕು. ಮುಂಬರುವ ಬಜೆಟ್ನಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಯಾವ ರೀತಿ ಸಹಾಯಧನ ನೀಡಬಹುದು ಎಂಬುದರ ಕುರಿತು ಸಮ್ಮೇಳನದಲ್ಲಿ ಸ್ಪಷ್ಟ ಅಭಿಪ್ರಾಯ ರೂಪಿಸಿದರೆ ಅದೇ ಪ್ರಕಾರ ಸರ್ಕಾರ ನೆರವು ನೀಡಲಿದೆ ಎಂದರು.