ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕು ಕೇಂದ್ರವಾಗಿ ಎರಡು ವರ್ಷಗಳೇ ಕಳೆದರೂ ಇನ್ನೂ ಯಾವುದೇ ಕಚೇರಿಗಳು ಪ್ರಾರಂಭವಾಗಿಲ್ಲ. ಇದರಿಂದ ಕಾಗವಾಡ ತಾಲೂಕಿನ ಸುತ್ತ ಮುತ್ತಲಿನ ಗ್ರಾಮದ ಜನರಿಗೆ ತುಂಬಾ ತೊಂದರೆಗಳಾಗುತ್ತಿವೆ. ಇದ್ಯಾವುದನ್ನು ಗಮನಿಸದ ಸರ್ಕಾರದ ವಿರುದ್ಧ ಜಯ ಕರ್ನಾಟಕ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಚನ್ನಮ್ಮ ವೃತ್ತದಿಂದ ಪ್ರಾರಂಭವಾದ ಪ್ರತಿಭಟನೆ ತಹಶೀಲ್ದಾರ ಕಾರ್ಯಾಲಯದವರೆಗೂ ನಡೆಯಿತು. ನಂತರ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಆರ್.ಚಂದ್ರಪ್ಪ ಮಾತನಾಡಿದರು. ಕಾಗವಾಡ ತಾಲೂಕು ಘೋಷಣೆಯಾಗಿ ಎರಡು ವರ್ಷ ಸಮೀಪಿಸುತ್ತಿದೆ. ಆದರೂ ಸಬ್ ರಿಜಿಸ್ಟರ್, ತಾಲೂಕಾ ಪಂಚಾಯತ್, ಪಿಡಬ್ಲೂಡಿ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಹಾರ ಇಲಾಖೆ, ಅಬಕಾರಿ ಇಲಾಖೆ ಇನ್ನು ಹಲವಾರು ಕಚೇರಿಗಳನ್ನ ಪ್ರಾರಂಭಿಸಿಲ್ಲ. ತಾಲೂಕಿಗೆ ಬರುವಂತಹ ಎಲ್ಲ ಕಚೇರಿಗಳು ಆದಷ್ಟು ಬೇಗನೆ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಪರಿಮಳಾ ದೇಶಪಾಂಡೆ, ಈಗಾಗಲೇ ಕಚೇರಿ ಕಟ್ಟಡಕ್ಕಾಗಿ ಸ್ಥಳ ನಿಗದಿ ಮಾಡಲಾಗಿದೆ. ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಈ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದು ತಿಳಿದರು.