ಚಿಕ್ಕೋಡಿ: ಸರ್ಕಾರದ ನಿರ್ಲಕ್ಷ್ಯದಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಸಂತ್ರಸ್ತರು ಪ್ಲಾಸ್ಟಿಕ್ ಶೆಡ್ನಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜಕಾರಣಿಗಳು ಕೊಟ್ಟ ಮಾತು ತಪ್ಪಿದ್ದಾರೆ ಎಂದು ಸಂತ್ರಸ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ 15-20 ದಿನಗಳ ಕಾಲ ಸಂಪೂರ್ಣ ಮಾಂಜರಿ ಗ್ರಾಮ ಮುಳುಗಡೆಯಾಗಿತ್ತು. ಇದರಿಂದ ಸುಮಾರು 500ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ. ಮನೆ ಕಳೆದುಕೊಂಡ ಜನರು ಅಕ್ಷರಶಃ ಬೀದಿ ಪಾಲಾಗಿದ್ದಾರೆ. ಮನೆ ಕಳೆದುಕೊಂಡವರಿಗೆ ಒಂದು ವಾರದೊಳಗೆ ಶೆಡ್ ನಿರ್ಮಾಣ ಮಾಡೋದಾಗಿ ಡಿಸಿಎಂ ಲಕ್ಷ್ಮಣ ಸವದಿ ಆಗಸ್ಟ್ 31ರಂದು ಅಥಣಿಯಲ್ಲಿ ಹೇಳಿದ್ದರು. ಆದರೆ, ತಾತ್ಕಾಲಿಕ ಶೆಡ್ ನಿರ್ಮಿಸುವ ಯೋಜನೆ ಹುಸಿಯಾಗಿದೆ.
ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಮಾಂಜರಿ ಗ್ರಾಮಕ್ಕೆ ಭೇಟಿ ನೀಡಿ, 2 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಇನ್ನೂ, ಸಮಸ್ಯೆ ಬಗೆಹರಿಸದ ವಿರುದ್ಧ ನೆರೆ ಸಂತ್ರಸ್ತರು ಪ್ರತಿಭಟಸಿ. ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಶೆಡ್ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.