ಬೆಳಗಾವಿ: ರಾಜ್ಯ ಸರ್ಕಾರಿ ನೌಕರರು ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದಿದ್ದಲ್ಲಿ ಅದನ್ನು ಸ್ವಯಂ ಪ್ರೇರಣೆಯಿಂದ ಆಹಾರ ಇಲಾಖೆಗೆ ಮರಳಿಸಿ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದ್ದಾರೆ.
ಸರ್ಕಾರಿ ನೌಕರರು ಇಲಾಖೆಗೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಎಂದು ಇತ್ತೀಚೆಗೆ ಸಚಿವ ಉಮೇಶ್ ಕತ್ತಿ ಸಭೆಯಲ್ಲಿ ಆರೋಪಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಇದರಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
ಓದಿ: ಬೈಪಾಸ್ ರಸ್ತೆಗೆ ವಿರೋಧ: ಬೆಳಗಾವಿ ರೈತರಿಂದ ಅರೆಬೆತ್ತಲೆ ಪ್ರತಿಭಟನೆ
ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಫೆ. 20ರೊಳಗಾಗಿ ಸಂಬಂಧಪಟ್ಟ ಆಹಾರ ಇಲಾಖೆಯ ಕಾರ್ಯಾಲಯಕ್ಕೆ ನೀಡಿದರೆ ಯಾವುದೇ ರೀತಿಯ ಕ್ರಮ ಜರುಗಿಸುವುದಿಲ್ಲ. ತದನಂತರ ಎಚ್ಆರ್ಎಮ್ಎಸ್ ತಂತ್ರಾಂಶದಿಂದ ಮಾಹಿತಿ ಪಡೆದು ಶೋಧ ನಡೆಸಿ ಪತ್ತೆ ಹಚ್ಚಿದ್ದಲ್ಲಿ ಅಂತಹ ನೌಕರರ ಮೇಲೆ ಕಾನೂನು ಪ್ರಕಾರ ಕ್ರಮವಹಿಸಿ ಪಡಿತರ ಚೀಟಿ ಪಡೆದ ದಿನಾಂಕದಿಂದ ಇಲ್ಲಿಯವರೆಗೆ ದಂಡವನ್ನು ವಸೂಲಿ ಮಾಡಲಾಗುವುದು. ಅಂತಹ ನೌಕರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿರುವ ಎಲ್ಲಾ ನೌಕರರು ನಿಯಮ ಬಾಹಿರವಾಗಿ ಪಡೆದುಕೊಂಡಿರುವ ಪಡಿತರ ಚೀಟಿಗಳನ್ನು ಕೂಡಲೇ ಹಿಂದಿರುಗಿಸಬೇಕು. ಒಂದು ವೇಳೆ ಪಡಿತರ ಚೀಟಿ ಹಿಂದಿರುಗಿಸದಿದ್ದರೆ ದಂಡ ವಸೂಲಿಯ ಜತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಎಚ್ಚರಿಕೆ ನೀಡಿದ್ದಾರೆ.