ಬೆಳಗಾವಿ : ಜಾತ್ರೆಗಳಲ್ಲಿ ನಡೆಯುವ ರಥೋತ್ಸವಗಳಲ್ಲಿ ಸಾಮಾನ್ಯವಾಗಿ ಬಾಳೆಹಣ್ಣು, ಉತ್ತತ್ತಿ ಮುಂತಾದವುಗಳನ್ನು ದೇವರಿಗೆ ಎಸೆಯುವುದನ್ನು ನಾವು ನೋಡಿದ್ದೇವೆ. ಆದರೆ, ಬೆಳಗಾವಿಯಲ್ಲಿ ನಡೆಯುವ ಜಾತ್ರೆಯೊಂದರಲ್ಲಿ ಗರ್ಭಗುಡಿ ಮೇಲೆ ಕೋಳಿ ಮರಿಗಳನ್ನು ಎಸೆಯುವ ವಿಶಿಷ್ಟ ಪದ್ಧತಿಯಿದೆ. ವಡಗಾವಿ ಆರಾಧ್ಯ ದೇವಿ ಮಂಗಾಯಿದೇವಿ ಜಾತ್ರೆಯಲ್ಲಿ ಕೋಳಿ ಮರಿಗಳನ್ನು ಗರ್ಭಗುಡಿ ಮೇಲೆ ಎಸೆಯುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯ ಬಳಿಕ ಬರುವ ಮಂಗಳವಾರದಿಂದ ಮಂಗಾಯಿ ದೇವಿ ಜಾತ್ರೆ ಪ್ರಾರಂಭವಾಗುತ್ತದೆ. ಅದ್ಧೂರಿ ಜಾತ್ರೆಗೆ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಮಂಗಳವಾರದಿಂದ ಶುಕ್ರವಾರದವರೆಗೆ ನಾಲ್ಕು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಅಪಾರ ಕಾರಣಿಕ ಹೊಂದಿರುವ ಮಂಗಾಯಿ ದೇವಿಯು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.
ವಿಶಿಷ್ಠ ಪದ್ಧತಿ : ಕೋಳಿ ಮರಿಗಳನ್ನು ಮಂದಿರದ ಗರ್ಭಗುಡಿಯ ಮೇಲೆ ಹಾರಿಸುವ ಪದ್ಧತಿ ಈ ದೇವಸ್ಥಾನದ ವೈಶಿಷ್ಟ್ಯತೆಗಳಲ್ಲಿ ಒಂದು. ಈ ಮೊದಲು ಇಲ್ಲಿನ ದೇವಿಗೆ ಕುರಿ, ಕೋಳಿಗಳನ್ನು ಬಲಿ ಕೊಡಲಾಗುತ್ತಿತ್ತು. ಆದರೆ, ಇದರ ನಿಷೇಧದ ಬಳಿಕ ಇದೀಗ ಭಕ್ತರು ಕೋಳಿ ಮರಿಗಳನ್ನು ತಾಯಿಯ ಗರ್ಭಗುಡಿಯ ಮೇಲೆ ಹಾರಿಸಿ ತಮ್ಮ ಹರಕೆ ಪೂರೈಸುತ್ತಾರೆ.
ತವರು ಮನೆ ದೇವತೆ : ವಡಗಾವಿಯ ಪಾಟೀಲ್ ಗಲ್ಲಿಯಲ್ಲಿರುವ ಮಂಗಾಯಿ ದೇವಿ ‘ತವರು ಮನೆಯ ದೇವತೆ’ ಎಂದೇ ಪ್ರಸಿದ್ಧಿ ಪಡೆದಿದ್ದಾಳೆ. ದೇವಿಯ ಜಾತ್ರೆಗೆ ಹೆಣ್ಣು ಮಕ್ಕಳೇ ಹೆಚ್ಚಾಗಿ ಬರುತ್ತಾರೆ. ಬೆಳಗಾವಿ ಜಿಲ್ಲೆಯಿಂದ ಬೇರೆ ಬೇರೆ ಊರುಗಳಿಗೆ ಮದುವೆಯಾಗಿ ಹೋದ ಬಹುತೇಕ ಹೆಣ್ಣುಮಕ್ಕಳು ಆಷಾಢ ಮಾಸದಲ್ಲಿ ತವರಿಗೆ ಮರಳಿ ತವರೂರು ಜಾತ್ರೆಗೆ ಬರುತ್ತಾರೆ. ಅದಕ್ಕಾಗಿಯೇ ಈ ಮಂಗಾಯಿ ದೇವತೆಯನ್ನು ತವರು ಮನೆ ದೇವತೆ ಎಂದು ಕರೆಯುವುದುಂಟು.
ಈ ಬಗ್ಗೆ ಮಾತನಾಡಿದ ಭಕ್ತರಾದ ಶೋಭಾ ಎಕಬೋಟೆ, "ಮಂಗಾಯಿ ನಮ್ಮ ಗ್ರಾಮದೇವತೆ. ನನ್ನ ತವರು ಬೆಳಗಾವಿ, ಮದುವೆ ಮಾಡಿಕೊಟ್ಟಿದ್ದು ಹುಬ್ಬಳ್ಳಿಗೆ. ಪ್ರತಿ ವರ್ಷ ಜಾತ್ರೆಗೆ ಬಂದು ಉಡಿ ತುಂಬಿ ಹೋಗುತ್ತೇವೆ. ದೇವಿಯಲ್ಲಿ ಬೇಡಿಕೊಂಡ ಇಷ್ಟಾರ್ಥ ಈಡೇರಿದ ಬಳಿಕ ಕೋಳಿ ಮರಿ ಹಾರಿಸಿ ಹರಿಕೆ ತೀರಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ" ಎಂದು ಹೇಳಿದರು.
ಶೃತಿ ರಾಯ್ಕರ್ ಮತ್ತು ಸುರೇಖಾ ರಾಠೋಡ್ ಮಾತನಾಡಿ, "ಮಂಗಾಯಿ ದೇವಿಯಲ್ಲಿ ಏನೇ ಬೇಡಿಕೊಂಡರೂ ಖಂಡಿತವಾಗಲೂ ಈಡೇರುತ್ತದೆ. ಈ ದೇವಿ ಬಹಳ ಶಕ್ತಿಶಾಲಿ. ನಾವು ಚಿಕ್ಕಂದಿನಿಂದಲೂ ಜಾತ್ರೆಗೆ ಬರುತ್ತಿದ್ದೇವೆ. ಕೋಳಿ ಮರಿ ಹಾರಿಸಿ ನಮ್ಮ ಹರಿಕೆ ತೀರಿಸುತ್ತೇವೆ" ಎಂದರು.
ಭಕ್ತರು ಹರಕೆ ತೀರಿಸಲು ಗರ್ಭಗುಡಿ ಮೇಲೆ ಎಸೆಯುವ ಕೆಲವು ಕೋಳಿ ಮರಿಗಳು ಸಾವನ್ನಪ್ಪುತ್ತವೆ. ಜೀವಂತ ಮರಿಗಳನ್ನು ಸಂಗ್ರಹಿಸಿ ದೇವಸ್ಥಾನದವರು ಮಾರಾಟ ಮಾಡುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮತ್ತೋರ್ವ ಭಕ್ತರಾದ ವರ್ಷಾ ಸುತಾರ, "ಇದೇ ಮೊದಲ ಬಾರಿಗೆ ನಾನು ಜಾತ್ರೆಗೆ ಬಂದಿದ್ದೇನೆ. ಕೋಳಿ ಮರಿಗಳನ್ನು ನಾವು ರಕ್ಷಣೆ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಹಾರಿಸುವುದನ್ನು ನೋಡಿ ಬಹಳ ಬೇಜಾರಾಗುತ್ತಿದೆ. ಸಣ್ಣ ಮರಿಗಳು ಸಾಯುವುದು ನೋಡಲು ಆಗುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ಚಾಮರಾಜನಗರದಲ್ಲಿ ನಡೆದ ರಾಜ್ಯದ ಏಕೈಕ ಆಷಾಢ ರಥೋತ್ಸವ.. ಇಲ್ಲಿ ಹಣ್ಣು-ದವನ ಎಸೆದರೆ ನವಜೋಡಿಗಳಿಗೆ ಸಂತಾನ ಭಾಗ್ಯ ಎಂಬುದು ಭಕ್ತರ ನಂಬಿಕೆ!