ಚಿಕ್ಕೋಡಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೂನೂರ ಗ್ರಾಮದ ಶ್ರೀ ವಿಠ್ಠಲ ದೇವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಜಾತ್ರೆಯ ಅಂಗವಾಗಿ ಇಡೀ ದೇಗುಲದ ಆವರಣ ಹಳದಿಮಯವಾಗಿದ್ದು , ಭಕ್ತರು ಭಂಡಾರ(ಅರಿಶಿಣ)ದಲ್ಲಿ ಮಿಂದೆದ್ದರು.
ಜಾತ್ರೆಯಂಗವಾಗಿ ಡೊಳ್ಳು ಬಾರಿಸುವ ತಂಡಗಳಿಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಡೊಳ್ಳು ಬಾರಿಸುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರಾತ್ರಿಯಿಡಿ ಜಾತ್ರೆ ನಡೆದು ಬೆಳಗಿನ ಜಾವ ಶ್ರೀ ವಿಠ್ಠಲ ದೇವರ ಪಲ್ಲಕ್ಕಿ ಉತ್ಸವ ಜರಗುವ ಸಂಧರ್ಭದಲ್ಲಿ ಸಾವಿರಾರು ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಭಂಡಾರ ಹಾರಿಸಿ ದೇವರ ಮೊರೆ ಹೋದರು. ಇಡೀ ದೇವಸ್ಥಾನದ ಆವರಣ ಭಂಡಾರದಿಂದ ತುಂಬಿ ತುಳುಕುತ್ತಿತ್ತು.
ದೇವಸ್ಥಾನದ ಅರ್ಚಕರು ದೇಶದಲ್ಲಿ ಆಗು ಹೋಗುವ ಘಟನೆಗಳ ಬಗ್ಗೆ ಭವಿಷ್ಯ ನುಡಿಯುವುದು ಈ ಜಾತ್ರೆಯ ಇನ್ನೊಂದು ವಿಶೇಷತೆ. ಒಟ್ಟಾರೆ ವಿಠ್ಠಲ ದೇವರ ಜಾತ್ರಾ ಮಹೋತ್ಸವು ಭಂಡಾರಮಯವಾಗಿದ್ದು ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.