ಬೆಳಗಾವಿ : ಜಿಲ್ಲೆಯ ಗೋಕಾಕ್ ತಾಲೂಕಿನ ಹುದಲಿ ಗ್ರಾಮದ ಹೊರವಲಯದಲ್ಲಿರುವ ಬೃಹತ್ ಕಾಲುವೆವೊಂದರಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಾಲಕಿಯೊಬ್ಬಳು ತನ್ನ ಸಹಪಾಠಿಗಳೊಂದಿಗೆ ಸೇರಿ ಕಾಪಾಡಿದ ಘಟನೆ ನಿನ್ನೆ ಸಂಜೆ ನಡೆದಿದೆ. ಗೋಕಾಕ್ ತಾಲೂಕಿನ ಹುದಲಿ ಗ್ರಾಮದ ಬಸಪ್ಪ ಎಂಬುವರು ನಿನ್ನೆ ಸಂಜೆ ವಾಯುವಿಹಾರಕ್ಕೆಂದು ಕೆನಾಲ್ನ ದಂಡೆಯ ಮೇಲೆ ಹೋಗುತ್ತಿದ್ದರು.
ಈ ವೇಳೆ ಆಯತಪ್ಪಿ ಕೆನಾಲ್ನಲ್ಲಿ ಬಿದ್ದಿದ್ದಾರೆ. ಇತ್ತ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬಿದ್ದಿದ್ದ ಬಸಪ್ಪ ಕೊಚ್ಚಿಕೊಂಡು ಹೋಗುತ್ತಿದ್ದರು. ಈ ವೇಳೆ ಕೆನಾಲ್ ಮೆಟ್ಟಿಲುಗಳ ಮೇಲೆ ಬಟ್ಟೆ ತೊಳೆಯಲು ಬಂದಿದ್ದ ಅದೇ ಗ್ರಾಮದ ಹೈಸ್ಕೂಲ್ ಓದುತ್ತಿರುವ ಶಶಿಕಲಾ ಪಾಟೀಲ ವೇಲ್ ಎಸೆದು ತನ್ನ ಸಹಪಾಠಿಗಳ ಸಹಾಯದಿಂದ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಕಾಪಾಡಿದ್ದಾರೆ. ಇತ್ತ ಶಶಿಕಲಾ ಮತ್ತು ಆಕೆಯ ಸಹಪಾಠಿಗಳ ಸಮಯ ಪ್ರಜ್ಞೆಯಿಂದ ಕಾಲುವೆಗೆ ಜಾರಿ ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯ ಪ್ರಾಣ ಉಳಿದಿದೆ.
ಅನುಭವ ಬಿಚ್ಚಿಟ್ಟ ಬಾಲಕಿ : ಈ ವೇಳೆ ಮಾತನಾಡಿದ ಶಶಿಕಲಾ ಪಾಟೀಲ, "ನಿನ್ನೆ ನಾನು ನನ್ನ ಸಹಪಾಠಿಗಳು ಬಟ್ಟೆ ತೊಳೆಯಲು ಕೆನಾಲ್ಗೆ ಹೋಗಿದ್ವಿ. ಈ ವೇಳೆ ಕಾಲುವೆಯ ನೀರಿನಲ್ಲಿ ಹರಿದು ಬರುತ್ತಿದ್ದ ವ್ಯಕ್ತಿಯನ್ನು ನೋಡಿ ಏನು ಮಾಡಬೇಕೆಂದು ತೋಚದೇ ಧೈರ್ಯದಿಂದ ಕಾಲುವೆಯ ಮೆಟ್ಟಿಲುಗಳ ಮೇಲೆ ನಿಂತು ನನ್ನ ವೇಲ್ ಹರಿಬಿಟ್ವಿ" ಎಂದು ಹೇಳಿದರು.
"ಬಳಿಕ ನಾನು ಮತ್ತು ನನ್ನ ಸಹಪಾಠಿಗಳು ವೇಲ್ ಹಿಡಿಯುವಂತೆ ಆ ವ್ಯಕ್ತಿಗೆ ಹೇಳಿದೆವು. ಆಗ ಆತ ವೇಲ್ ಹಿಡಿದುಕೊಂಡರು. ನಂತರ ಅವರನ್ನು ಜೋರಾಗಿ ಎಳೆದು ದಡಕ್ಕೆ ಸೇರಿಸಿದೆವು. ಇದರಿಂದ ಜೀವ ಉಳಿಸಿದ ಖುಷಿ ತಂದಿದೆ" ಎಂದು ತಮ್ಮ ಅನುಭವ ಹಂಚಿಕೊಂಡರು.
ಇದನ್ನೂ ಓದಿ: ಮುದ್ದೇಬಿಹಾಳದಲ್ಲಿ ಕೊಲೆಯಾದ ಅಪ್ರಾಪ್ತೆಯ ಗುರುತು ಪತ್ತೆ: ಪ್ರೀತಿಸಿದ್ದೇ ಘಟನೆಗೆ ಕಾರಣವಾಯ್ತಾ?