ಬೆಳಗಾವಿ: ಇಲ್ಲಿನ ಬಾಕ್ಸೈಟ್ ರಸ್ತೆಯ ಬಸವ ಕಾಲೋನಿ ಬಳಿಯಿರುವ ಡಬಲ್ ರಸ್ತೆಯ ಬದಿಯಲ್ಲಿ ಹಾಕಲಾಗಿದ್ದ ಮೇಘಾ ಗ್ಯಾಸ್ ಕಂಪನಿಯ ಪೈಪ್ ಲೈನ್ನಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಆತಂಕ ಸೃಷ್ಟಿಸಿತ್ತು.
ಬಸವ ಕಾಲೋನಿ ಬಳಿಯಿರುವ ರಸ್ತೆಯಲ್ಲಿ ಬದಿಗೆ ಹಾಕಲಾಗಿದ್ದ ಮೇಘಾ ಗ್ಯಾಸ್ ಕಂಪನಿಯ ಪೈಪ್ ಲೈನ್ನಲ್ಲಿ ಅನಿಲ ಸೋರಿಕೆಯಾದ ಹಿನ್ನೆಲೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ನೋಡಿದ ಪ್ರಯಾಣಿಕರು, ಅಕ್ಕಪಕ್ಕದ ನಿವಾಸಿಗಳು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೂ ಮುನ್ನ ಬಾಕ್ಸೈಟ್ ರಸ್ತೆಯ ಬಸವ ಕಾಲೋನಿಯ ಸುತ್ತಮುತ್ತಲಿನ ಜನರು ಮನೆಯಿಂದ ಹೊರಗಡೆ ಬಂದಿದ್ದರು. ಜೊತೆಗೆ ಸಾರ್ವಜನಿಕರು, ದಾರಿ ಹೋಕರು ಈ ದೃಶ್ಯ ಕಂಡು ಹೌಹಾರಿದರು. ಆದರೆ, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದಿದ್ದರಿಂದ ಮುಂದಾಗುವ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು.