ಬೆಳಗಾವಿ : ದೇಶದಲ್ಲಿ ಮುಂಬೈ ಬಿಟ್ಟರೆ ಬೆಳಗಾವಿಯಲ್ಲಿ ಆಚರಿಸಲಾಗುವ ಅದ್ಧೂರಿ ಗಣೇಶೋತ್ಸವದ ನಿಮಜ್ಜನ ಮೆರವಣಿಗೆ ಸತತ 24 ಗಂಟೆಗಳ ಕಾಲ ನಡೆಯಿತು. ಎರಡು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಅದ್ಧೂರಿ ಗಣೇಶೋತ್ಸವ ಆಚರಿಸುತ್ತಿರುವ ಹಿನ್ನಲೆ ನಿನ್ನೆ ಸಂಜೆಯಿಂದಲೂ ಮಳೆ ಬಿಸಿಲನ್ನು ಲೆಕ್ಕಿಸದೇ ಲಕ್ಷಾಂತರ ಭಕ್ತರು ಕುಣಿದು ಕುಪ್ಪಳಿಸಿದರು.
ಬೆಳಗಾವಿ ನಗರದಲ್ಲಿ 382 ಹಾಗೂ ಒಟ್ಟು ಜಿಲ್ಲೆಯಲ್ಲಿ 450ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮಂಡಳಿಗಳಿದ್ದು, ಮುಂಬೈ ಬಿಟ್ಟರೆ ಅತಿ ಅದ್ಧೂರಿಯಾಗಿ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಿಸಲಾಗುತ್ತದೆ. ಕಳೆದ ಹನ್ನೊಂದು ದಿನಗಳಿಂದ ಗಣೇಶ ಮಂಡಳಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅತಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸಿದ್ದವು.
ನಿನ್ನೆ ಚತುರ್ದಶಿ ಇದ್ದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ 5 ಗಂಟೆಗೆ ಪ್ರಾರಂಭವಾಗಿದ್ದ ಗಣೇಶೋತ್ಸವ ನಿಮಜ್ಜನ ಮೆರವಣಿಗೆ ಸತತ 24 ಗಂಟೆಗಳ ಕಾಲ ನಡೆಯಿತು. ಬಳಿಕ ಗಣೇಶ ಮೂರ್ತಿಯನ್ನು ಕಪಿಲೇಶ್ವರ ಹೊಂಡದಲ್ಲಿ ನಿಮಜ್ಜನ ಮಾಡಲಾಯಿತು.
ಈ ವೇಳೆ ಗಣಪತಿ ಬಪ್ಪಾ ಮೋರಯಾ, ಮುಂದಿನ ವರ್ಷ ಬೇಗ ಬಾ ಎನ್ನುವ ಘೋಷವಾಕ್ಯ ಎಲ್ಲಡೆ ಮೊಳಗಿತ್ತು. ಇದೇ ವೇಳೆಯಲ್ಲಿ ಕೆಲವು ನಗರಸೇವಕರು ಹಾಗೂ ಎಸಿಪಿ ನಾರಾಯಣ ಭರಮನಿ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪಾಲಿಕೆ ಅಧಿಕಾರಿಗಳಾದ ಸಂಜಯ ಡುಮ್ಮಗೋಳ, ಲಕ್ಷ್ಮೀ ನಿಪ್ಪಾಣಿಕರ್ ಡಿಜೆ ಹಾಡಿಗೆ ಸಖತ್ ನೃತ್ಯ ಮಾಡಿ ಸಂಭ್ರಮಿಸಿದರು.
ನಗರದಲ್ಲಿ 11 ದಿನಗಳ ಕಾಲ ಗಣೇಶೋತ್ಸವ ಆಚರಣೆ : ಗಡಿ ಜಿಲ್ಲೆ ಬೆಳಗಾವಿಯಲ್ಲಿ 11 ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಉತ್ಸವದ ವಿಸರ್ಜನಾ ಮೆರವಣಿಗೆಗೆ ಶುಕ್ರವಾರ ಸಂಜೆ 5ಗಂಟೆಯ ಸುಮಾರಿಗೆ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ, ಈರಣ್ಣ ಕಡಾಡಿ, ಮಂಗಲ ಅಂಗಡಿ, ಮಹಾಂತೇಶ ಕವಟಗಿಮಠ ಅವರು ನಗರದ ಕಿರ್ಲೋಸ್ಕರ್ ರಸ್ತೆಯಿಂದ ಚಾಲನೆ ನೀಡಿದರು.
ಈ ವೇಳೆ ಬೆಳಗಾವಿಯಲ್ಲಿ 75 ವರ್ಷ ಪೂರೈಸಿದ ಗಣೇಶ ಮಂಡಳಿಯ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದಲ್ಲಿ ಲಕ್ಷಾಂತರ ಭಕ್ತರು ಗಣೇಶನ ದರ್ಶನಕ್ಕೆ ಹಾಗೂ ವಿಸರ್ಜನೆಯ ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದರು.
ಗಣೇಶೋತ್ಸವದಲ್ಲಿ ರಾರಾಜಿಸಿದ ವೀರ ಸಾವರ್ಕರ್ ,ಲೋಕಮಾನ್ಯ ತಿಲಕ್ : ನಗರದಲ್ಲಿನ ಒಟ್ಟು 382 ಸಾರ್ವಜನಿಕ ಗಣೇಶ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಗಣೇಶೋತ್ಸವದಲ್ಲಿ ಭಾಗಿಯಾಗಿದ್ದ ಗಣೇಶ ನಿಮಜ್ಜನಾ ವಾಹನಗಳಲ್ಲಿ ವೀರ ಸಾವರ್ಕರ್, ಲೋಕಮಾನ್ಯ ತಿಲಕ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಕೆಲವರು ವೀರ ಸಾರ್ವಕರ್ ಹಾಗೂ ಬಾಲಗಂಗಾಧರ ತಿಲಕರ ಭಾವಚಿತ್ರಗಳನ್ನು ಹಿಂದೆಯೇ ಗಣೇಶ ಮಂಡಳಿಗಳಿಗೆ ವಿತರಣೆ ಮಾಡಿದ್ದರು.
ರಾತ್ರಿಯಿಡೀ ಗಣೇಶ ಮೂರ್ತಿಗಳ ನಿಮಜ್ಜನ : ಬೆಳಗಾವಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಗಣೇಶ ನಿಮಜ್ಜನ ಮೆರವಣಿಗೆ ಅಂತಿಮವಾಗಿ ಕಪಿಲೇಶ್ವರ ಮಂದಿರದ ಹೊಂಡದಲ್ಲಿ ನಿಮಜ್ಜನ ಮಾಡಲಾಯಿತು. ಬೆಳಗಾವಿ ಮಹಾನಗರ ಪಾಲಿಕೆಯಿಂದ ಎತ್ತರದ ಗಣೇಶ ಮೂರ್ತಿ ವಿಸರ್ಜನೆಗೆ ವಿಶೇಷವಾಗಿ ಕ್ರೇನ್ ಗಳ ಬಳಕೆಯನ್ನು ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಬಗೆಯ ಸಾಂಪ್ರದಾಯಿಕ ನೃತ್ಯಗಳು, ವಾದ್ಯಗಳು ನೋಡುಗರ ಗಮನ ಸೆಳೆದವು. ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನ ಹಿನ್ನೆಲೆ ಬೆಳಗಾವಿಯ ಗಣೇಶ ಉತ್ಸವಕ್ಕೆ ಮೆರಗು ಬಂದಿರಲಿಲ್ಲ. ಆದರೆ, ಈ ಬಾರಿ ಅದ್ದೂರಿಯಾಗಿ ನಗರದಲ್ಲಿ ಗಣೇಶೋತ್ಸವವನ್ನು ಆಚರಿಸಲಾಯಿತು.
ಬಿಗಿ ಪೊಲೀಸ್ ಬಂದೋಬಸ್ತ್ : ನಗರದಲ್ಲಿ ಗಣೇಶ ನಿಮಜ್ಜನ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯಾ, ಡಿಸಿಪಿಗಳಾದ ರವೀಂದ್ರ ಗಡಾಡಿ, ಸ್ನೇಹಾ ಪಿ.ವಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗಣೇಶೋತ್ಸವ ಮೆರವಣಿಗೆ ಭದ್ರತೆಗೆ 07 ಎಸ್ಪಿ, 28 ಡಿವೈಎಸ್ಪಿ, 68 ಪಿಐ,104 ಪಿಎಸ್ಐ,164 ಎಸ್ಐಗಳು, 3000 ಜನ ಪೊಲೀಸ್ ಸಿಬ್ಬಂದಿಗಳು, 10ಕೆಎಸ್ಆರ್ಪಿ ತುಕಡಿ,07 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು. ಅದರ ಜೊತೆಗೆ ಆರ್ಎಎಫ್ ಬಟಾಲಿಯನ್, 20 ಡ್ರೋನ್ ಕ್ಯಾಮೆರಾಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ 700 ಸಿಸಿ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿತ್ತು. ಇದರ ಜೊತೆಗೆ ವಾಟರ್ ಜೆಟ್ ವಾಹನ, ವಜ್ರ ವಾಹನ ಹಾಗೂ 100 ಸ್ಕೈ ಸೆಂಟ್ರಿಗಳು, 15 ವಾಚ್ ಟವರ್ ಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗಿತ್ತು.
ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಗಣಪತಿ ನಿಮಜ್ಜನದ ವೇಳೆ 20 ಮಂದಿ ದಾರುಣ ಸಾವು