ಚಿಕ್ಕೋಡಿ: ಚಿಕ್ಕೋಡಿ-ಸದಲಗಾ ಮತಕ್ಷೇತ್ರ ವ್ಯಾಪ್ತಿಗೆ ಬರುವ ಮೂರು ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಶಾಸಕ ಗಣೇಶ ಹುಕ್ಕೇರಿ ಯೋಜನೆ ರೂಪಿಸಿದ್ದಾರೆ.
ಕೆರೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್, ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ವಾಳಕಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹೊಸ ಯಡೂರ ಶಾಲೆಗಳಿಗೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ 2.83 ಕೋಟಿ ರೂಪಾಯಿ ಯೋಜನೆಯ ಪ್ರಸ್ತಾವನೆ ರೂಪಿಸಲಾಗಿದೆ.
ಚಿಕ್ಕೋಡಿಯಲ್ಲಿ ರಸ್ತೆ, ಸಮುದಾಯ ಭವನ, ಚರಂಡಿ, ನೀರಾವರಿ ಯೋಜನೆ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಆದರೆ, ಶಿಕ್ಷಣ ಕ್ಷೇತ್ರ ಮಾತ್ರ ಹಿಂದುಳಿದಿದ್ದು, ಶಾಸಕರು ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ.
ಕೆರೂರದ ಕರ್ನಾಟಕ ಪಬ್ಲಿಕ್ ಸ್ಕೂಲ್ :
ಕೆರೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 1 ರಿಂದ 12 ನೇ ತರಗತಿವರೆಗೆ 1,089 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆ ಅಭಿವೃದ್ಧಿಗೆ ಶಾಸಕ ಗಣೇಶ ಹುಕ್ಕೇರಿ 1.1 ಕೋಟಿ ರೂ. ಅನುದಾನದಲ್ಲಿ ಯೋಜನೆ ರೂಪಿಸಿದ್ದಾರೆ. ಶಾಲಾ ಕಟ್ಟಡ, ಕಲಿಕಾ ಉಪಕರಣಗಳು, ಶಾಶ್ವತ ಕುಡಿಯುವ ನೀರು, ಶೌಚಾಲಯ ಮತ್ತು ಕಾಂಪೌಂಡ್ ನಿರ್ಮಾಣ ಯೋಜನೆ ಒಳಗೊಂಡಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಹೊಸ ಯಡೂರ
2019 ರಲ್ಲಿ ಕೃಷ್ಣಾ ನದಿ ಪ್ರವಾಹದ ಹೊಡೆತಕ್ಕೆ ನಲುಗಿ ಹೋದ ಹೊಸ ಯಡೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಮುಳುಗಿಹೋಗಿತ್ತು. ಇದರಿಂದ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, 1 ರಿಂದ 7ನೇ ತರಗತಿಯಲ್ಲಿ 120 ಮಕ್ಕಳು ಓದುತ್ತಿದ್ದಾರೆ. ನದಿ ತೀರದಲ್ಲಿ ಶಾಲೆಯಿದ್ದರೂ ಮಕ್ಕಳು ಕುಡಿಯುವ ನೀರಿನಿಂದ ವಂಚಿತರಾಗಿದ್ದು, ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು ಸರ್ಕಾರದ ಮುಂದೆ ಬೇಡಿಕೆ ಇದೆ. ಶಾಲೆಯಲ್ಲಿ ಮೂರು ಕೊಠಡಿ, ಗ್ರಂಥಾಲಯ, ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ ಮಾಡಲು ಶಾಸಕರು 82.15 ಲಕ್ಷ ರೂ. ಯೋಜನೆ ಸಿದ್ಧಪಡಿಸಿದ್ದಾರೆ.
ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ವಾಳಕಿ
ಇಲ್ಲಿನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8 ನೇ ತರಗತಿಯವರೆಗೆ 485 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಮಳೆ ನೀರಿನಿಂದ ಶಾಲೆ ಶಿಥಿಲಾವಸ್ಥೆ ಕಂಡಿದೆ. ಗ್ರಾಮದಲ್ಲಿ ಮರಾಠಿ ಭಾಷಿಕರಿದ್ದರೂ ಕನ್ನಡ ಶಾಲೆಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಶಾಲೆಯ ಅಭಿವೃದ್ಧಿಗೆ ನಾಲ್ಕು ಕೊಠಡಿ ನಿರ್ಮಾಣಕ್ಕೆ 91.15 ಲಕ್ಷ ರೂ. ಯೋಜನೆ ರೂಪಿಸಲಾಗಿದೆ.