ಬೆಳಗಾವಿ: ಡಿಸಿಎಂ ಲಕ್ಷ್ಮಣ ಸವದಿ ಸ್ವಂತ ಕಾರಿಗೆ ಅವರ ಚಾಲಕ ಬಸ್ ಡಿಪೋದಲ್ಲಿನ ಬಂಕ್ನಿಂದ 44 ಲೀಟರ್ ಡೀಸೆಲ್ ಹಾಕಿಸಿಕೊಂಡಿರುವ ಪ್ರಸಂಗ ಬೆಳಕಿಗೆ ಬಂದಿದೆ.
ನಗರದ ಮೂರನೇ ಬಸ್ ಡಿಪೋದಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸಲಾದ ವಿಶ್ರಾಂತಿ ಗೃಹದ ಉದ್ಘಾಟನೆಗೆಂದು ಲಕ್ಷ್ಮಣ ಸವದಿ ಸ್ವಂತ ವಾಹನದಲ್ಲಿ ಆಗಮಿಸಿದ್ದರು. ಅತ್ತ ಡಿಸಿಎಂ ಲಕ್ಷ್ಮಣ ಸವದಿ ವಿಶ್ರಾಂತಿ ಗೃಹ ಉದ್ಘಾಟಿಸುತ್ತಿದ್ದರೆ ಇತ್ತ ಅವರ ಚಾಲಕ ಬಸ್ ಡಿಪೋದಲ್ಲಿನ ಬಂಕ್ನಿಂದ ಕಾರಿಗೆ ಫುಲ್ ಟ್ಯಾಂಕ್ ಇಂಧನ ತುಂಬಿಸಿಕೊಂಡಿದ್ದಾರೆ.
ಪ್ರತಿ ಲೀಟರ್ ಡೀಸೆಲ್ ದರ 78 ರೂ ಇದ್ದು, ಸವದಿ ಕಾರು ಚಾಲಕ ಒಟ್ಟು 3,432 ರೂ. ಡೀಸೆಲ್ ಹಾಕಿಸಿಕೊಂಡಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್ಗಳಿಗೆ ಡೀಸೆಲ್ ಹಾಕಲು ಮಾತ್ರ ಡಿಪೋದಲ್ಲಿ ಬಂಕ್ ತೆರೆಯಲಾಗಿದೆ. ಆದರೆ ಸಚಿವ ಸವದಿ ಬಳಸುವ ಸ್ವಂತ ವಾಹನಕ್ಕೂ ಇಲ್ಲೇ ಡೀಸೆಲ್ ಹಾಕಿಸಿಕೊಂಡಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಡಿಸಿಎಂ ಲಕ್ಷ್ಮಣ ಸವದಿ ಜಿಲ್ಲಾ ಪ್ರವಾಸದಲ್ಲಿದ್ದಾಗ ಸರ್ಕಾರಿ ವಾಹನಕ್ಕಿಂತ ತಮ್ಮ ಸ್ವಂತ ವಾಹನವನ್ನೇ ಹೆಚ್ಚಾಗಿ ಬಳಸುತ್ತಾರೆ.