ಚಿಕ್ಕೋಡಿ (ಬೆಳಗಾವಿ): ಜೂನ್ 25 ರಿಂದ ಮೇ 4 ರವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಚಿಕ್ಕೋಡಿ ವಿಭಾಗದ ಕೆಎಸ್ಆರ್‌ಟಿಸಿ ವತಿಯಿಂದ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಬಿ.ಎಂ ತಿಳಿಸಿದರು.
ಚಿಕ್ಕೋಡಿ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಪ್ರಯಾಣಿಸುವಾಗ ತಮ್ಮ ಪ್ರವೇಶ ಪತ್ರ (ಹಾಲ್ ಟಿಕೇಟ್) ತೋರಿಸಿದರೆ ಸಾಕು. ಅಂತಹ ವಿದ್ಯಾರ್ಥಿಗಳಿಗೆ ಸಂಸ್ಥೆ ಉಚಿತ ಪ್ರಯಾಣದ ಅವಕಾಶ ನೀಡಲಿದೆ ಎಂದರು.
ಕೊರೊನಾ ಸೋಂಕು ಸಲುವಾಗಿ ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳು ಭಯ ಪಡುವ ಅವಶ್ಯಕತೆ ಇಲ್ಲ. ಕಡ್ಡಾಯವಾಗಿ ಸ್ಯಾನಿಟೈಸರ್ ಅನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಇದರ ಜೊತೆಗೆ ವಿದ್ಯಾರ್ಥಿಗಳು ಕೂಡಾ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬಸ್‌ನಲ್ಲಿ ಪ್ರಯಾಣಿಸಬೇಕು ಎಂದು ತಿಳಿಸಿದರು.
ಮಹಾರಾಷ್ಟ್ರದಿಂದ ಪರೀಕ್ಷೆ ಬರೆಯಲು 46 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆ ವಿದ್ಯಾರ್ಥಿಗಳಿಗೂ ಕೂಡಾ ಬಸ್ ವ್ಯವಸ್ಥೆ ಮಾಡಲಾಗಿದೆ. ಅಂತರ್‌ರಾಜ್ಯ ವಿದ್ಯಾರ್ಥಿಗಳು ರಕರ್ನಾಟಕದ ಗಡಿಭಾಗದವರೆಗೆ ಬರುತ್ತಾರೆ. ಅಲ್ಲಿಂದ ಕೆಎಸ್ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಪರೀಕ್ಷೆ ಮುಗಿದ ನಂತರ ಮತ್ತೆ ಅವರನ್ನು ಗಡಿವರೆಗೆ ಬಿಡುವ ವ್ಯವಸ್ಥೆ ಮಾಡಿದ್ದೇವೆ ಎಂದರು.