ಬೆಳಗಾವಿ: ಸಾಧನೆಗೈದ ವಿದ್ಯಾರ್ಥಿಗಳಿಗೆ ಕಳೆದ ಎರಡು ವಾರಗಳ ಹಿಂದೆ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ನೀಡಿ ಗೌರವಿಸದೇ ವಿವಿ ವಂಚನೆ ಮಾಡಿದೆ ಎಂದು ವಿದ್ಯಾರ್ಥಿಯೊಬ್ಬರ ಪೋಷಕರಾದ ಗುರು ಅಮರೇಂದ್ರ ಜ್ಞಾನಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ವಿವಿಯ ಬಿ.ಎ. ಅಪರಾಧಶಾಸ್ತ್ರ ಮತ್ತು ಅಪರಾಧ ನ್ಯಾಯಿಕ ವಿಷಯದಲ್ಲಿ ವಿದ್ಯಾರ್ಥಿನಿ ಸೃಷ್ಟಿ ಜ್ಞಾನಿ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿಗೆ ಚಿನ್ನದ ಪದಕ ನೀಡದೇ ಅನುಚಿತವಾಗಿ ನಡೆದುಕೊಂಡಿರುವ ವಿವಿ ಕುಲಪತಿ ರಾಮಚಂದ್ರೇಗೌಡ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ವಿವಿಯಲ್ಲಿ ರ‍್ಯಾಂಕ್ ಗಳಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ ಮಾಡಲಾಗುವುದು ಎಂದು ಈ ಮೊದಲೇ ಪತ್ರ ಬರೆದಿದ್ದರು. ಅದೇ ರೀತಿ ನ್ಯಾಯ ಸಮ್ಮತವಾಗಿ ಚಿನ್ನದ ಪದಕ ನೀಡುವ ಬದಲು ಘಟಿಕೋತ್ಸವದಲ್ಲಿ ಸಾವಿರ ರೂ. ಮೊತ್ತದ ಡಿಡಿ ನೀಡಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ. ಈ ಕುರಿತು ಸೂಕ್ತ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ, ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿನಿ ಸೃಷ್ಟಿ ಜ್ಞಾನಿ ಮಾತನಾಡಿ, ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಯಾವ ವಿದ್ಯಾರ್ಥಿಗಳಿಗೂ ಪದಕ ವಿತರಣೆ ಮಾಡಿಲ್ಲ. ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡಿದ ಅವಮಾನ. ಕುಲಪತಿ ಅವರನ್ನು ಕೇಳಿದರೆ ಡಿಡಿ ತೆಗದುಕೊಳ್ಳಿ, ಇಲ್ಲವೇ ಕಾನೂನು ಹೋರಾಟ ಮಾಡುವುದಾದರೆ ಮಾಡಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ನಾವು ಈಗ ಕಾನೂನು ಹೋರಾಟ ಮಾಡುವುದಾಗಿ ಹೇಳಿದರು.